ಬೆಂಗಳೂರು, ನವೆಂಬರ್ 23: ಲೈಂಗಿಕ ಸಮಸ್ಯೆ ಪರಿಹಾರಕ್ಕೆ ರಸ್ತೆ ಬದಿ ಟೆಂಟ್ ಹಾಕಿ ಇರುವ ಆಯುರ್ವೇದ ಪಂಡಿತರ ಬಳಿಹೋಗಿ ಟೆಕ್ಕಿಯೊಬ್ಬ ಬರೋಬ್ಬರಿ 48 ಲಕ್ಷ ಕಳೆದುಕೊಂಡಿದಲ್ಲದೇ , ಅವರ ಚಿಕಿತ್ಸೆಯಿಂದಾಗಿ ಕಿಡ್ನಿಗೆ ಸಮಸ್ಯೆ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಸಂತ್ರಸ್ತ ಟೆಕ್ಕಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಸಂಬಂಧ ವಿಜಯ್ ಗೂರೂಜಿ ಎಂಬವರು ಸೇರಿ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ ವಿರುದ್ಧ ಪ್ರಕರಣ ದಾಖಲಾಗಿದೆ.

ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿ ತೇಜಸ್ ಎಂಬವರು ಕೆಂಗೇರಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಅಲ್ಲಿನ ಚಿಕಿತ್ಸೆಯಿಂದ ಅವರಿಗೆ ಫಲಿತಾಂಶ ಸಿಕ್ಕಿರಲಿಲ್ಲ. ಇದರಿಂದಾಗಿ ಆ ಆಸ್ಪತ್ರೆಯ ಎದುರಗಡೆ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಲಾಗಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಬೋರ್ಡ್ ಗಮನಿಸಿದ್ದ ತೇಜಸ್ ಅಲ್ಲಿಗೂ ಭೇಟಿ ನೀಡಿದ್ದರು. ಆ ವೇಳೆ ಅಲ್ಲಿದ್ದಾತ ವಿಜಯ್ ಗುರೂಜಿಗೆ ಹೇಳಿ ಚಿಕಿತ್ಸೆ ಕೊಡಿಸುತ್ತೇನೆಂದು ಟೆಕ್ಕಿಗೆ ಭರವಸೆ ನೀಡಿದ್ದಾನೆ. 1 ಗ್ರಾಂ ಔಷಧಿಗೆ 1,60,000 ರೂ. ಬೆಲೆ ಇರುವ ದೇವರಾಜ್ ಬೂಟಿ ಹೆಸರಿನ ಔಷಧವನ್ನು ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್ನಲ್ಲಿ ಮಾತ್ರ ಖರೀದಿಸಬೇಕೆಂದು ಒತ್ತಾಯ ಮಾಡಿದ್ದಾನೆ. ಅಲ್ಲದೆ ಆನ್‌ಲೈನ್ ಪೇಮೆಂಟ್ ಬೇಡ, ಯಾರ ಜೊತೆಗೆ ಬರಬಾರದೆಂದು ಷರತ್ತು ವಿಧಿಸಿದ್ದ ಎನ್ನಲಾಗಿದೆ.
ReadThis – ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ – ಇಂದು ನಡೆಯಬೇಕಿದ್ದ ಮದುವೆ ಮುಂದೂಡಿಕೆ
ಆತ ನೀಡಿದ್ದ ಸಲಹೆಯಂತೆ ತೇಜಸ್ ಹಲವು ಬಾರಿ ದೇವರಾಜ್ ಬೂಟಿ & ಭವನ ಬೂಟಿ ತೈಲ ಖರೀದಿಸಿದ್ದರು. ಒಟ್ಟು 17 ಲಕ್ಷ ರೂ.ಗಳನ್ನು ಔಷಧಕ್ಕಾಗಿ ಖರ್ಚು ಮಾಡಿದ್ದರು. ಆ ಬಳಿಕ ಹಣದ ಕೊರತೆಯಿಂದ HDFC ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಲೋನ್ ಪಡೆದು ಒಟ್ಟು 18 ಗ್ರಾಂ ಔಷಧ ಖರೀದಿಸಿದ್ದರು. ಸಮಸ್ಯೆ ಇದ್ದಾಗ ಬರದಿದ್ದರೆ ಮತ್ತಷ್ಟು ಸಮಸ್ಯೆ ಆಗುವುದಾಗಿ ಆರೋಪಿಗಳು ತೇಜಸ್ಗೆ ಬೆದರಿಕೆ ಹಾಕಿದ್ದು, ಕೊನೆಗೆ ಆರೋಗ್ಯ ಸಮಸ್ಯೆಯಿಂದ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ. ಆ ಬಳಿಕ ಎಚ್ಚೆತ್ತ ತೇಜಸ್ ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ತನಗೆ ವಂಚನೆ ಮಾಡಿದ ವಿಜಯ್ ಗೂರೂಜಿ, ವಿಜಯಲಕ್ಷ್ಮೀ ಆಯುರ್ವೇದಿಕ್ ವಿರುದ್ಧ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.



