ಬೆಂಗಳೂರು ಸೆಪ್ಟೆಂಬರ್ 25: ಇತ್ತೀಚೆಗಷ್ಟೇ ಮದುವೆಯಾಗಿ ಹನಿಮೂನ್ ಗೆ ಹೋಗಿದ್ದ ನವವಿವಾಹಿತೆ ಹನಿಮೂನನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ವಾಪಾಸ್ ಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಪ್ರಸ್ತುತ ಯುವತಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ವೈದ್ಯರು ‘ಬ್ರೈನ್ ಡೆಡ್’ ಎಂದು ತಿಳಿಸಿರುವುದು ಕುಟುಂಬಸ್ಥರನ್ನು ಆತಂಕಕ್ಕೆ ತಳ್ಳಿದೆ.
ಕಳೆದ ಅಕ್ಟೋಬರ್ 29ರಂದು 26 ವರ್ಷದ ಯುವತಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಹತ್ತು ದಿನಗಳ ಹಿಂದೆಯಷ್ಟೇ ಈ ಜೋಡಿ ಹನಿಮೂನ್‌ಗಾಗಿ ಶ್ರೀಲಂಕಾಕ್ಕೆ ತೆರಳಿತ್ತು. ಆದರೆ, ಅಲ್ಲಿ ಏನಾಯಿತೋ ಗೊತ್ತಿಲ್ಲ, ಪ್ರವಾಸ ಮುಗಿಸುವ ಮುನ್ನವೇ ದಂಪತಿ ಅರ್ಧದಲ್ಲೇ ಬೆಂಗಳೂರಿಗೆ ವಾಪಸ್ಸಾಗಿದ್ದರು.
ಬುಧವಾರ ಮಧ್ಯಾಹ್ನ ಪತಿಯ ಮನೆಯಲ್ಲೇ ನವವಧು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಈ ಘಟನೆಗೆ ಪತಿ ಮತ್ತು ಆತನ ಕುಟುಂಬದವರೇ ಕಾರಣ ಎಂದು ವಧುವಿನ ಪೋಷಕರು ಆರೋಪಿಸಿದ್ದಾರೆ. “ನಮ್ಮ ಮಗಳಿಗೆ ವಿಪರೀತ ಕಿರುಕುಳ ನೀಡಲಾಗಿದೆ, ಆ ಮಾನಸಿಕ ಹಿಂಸೆ ತಾಳಲಾರದೇ ಆಕೆ ಈ ನಿರ್ಧಾರ ಕೈಗೊಂಡಿದ್ದಾಳೆ” ಎಂದು ದೂರಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.



