ಬೆಂಗಳೂರು ಜುಲೈ 04: ಕೆ.ಆರ್. ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಬಿಎಂಟಿಸಿಯ ವಾಯುವಜ್ರ (ಎಸಿ) ಹಾಗೂ ಇವಿ (ಎಲೆಕ್ಟ್ರಿಕ್) ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸೇಂಟ್ ಮಾರ್ಥಾಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ.

ಅತಿವೇಗವಾಗಿ ಬಂದ ಇವಿ ಬಸ್, ಕೆ.ಆರ್. ವೃತ್ತದಲ್ಲಿ ನಿಂತಿದ್ದ ವಾಯುವಜ್ರ ಬಸ್ಗೆ ಹಿಂಭಾಗದಿಂದ ಬಲವಾಗಿ ಢಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಢಿಕ್ಕಿಯ ತೀವ್ರತೆಗೆ ಇವಿ ಬಸ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ನಲ್ಲಿದ್ದ ಕಲಬುರಗಿ ಮೂಲದ ಭಾಗ್ಯಮ್ಮ ಎಂಬ ಯುವತಿಯ ಕಾಲು ಸೀಟುಗಳ ಮಧ್ಯೆ ಸಿಲುಕಿಕೊಂಡಿತ್ತು. ತೀವ್ರ ರಕ್ತಸ್ರಾವದಿಂದಾಗಿ ಯುವತಿ ಬಸ್ನಲ್ಲೇ ನರಳಾಡುತ್ತಿದ್ದರು. ತಕ್ಷಣವೇ ರಂಗಕ್ಕಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ಬರೋಬ್ಬರಿ ಎರಡು ಗಂಟೆಗಳ ಕಾಲ ಸರಣಿ ಕಾರ್ಯಾಚರಣೆ ನಡೆಸಿ, ಯುವತಿಯನ್ನು ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ.
ಗಾಯಾಳು ಯುವತಿ ಭಾಗ್ಯಮ್ಮ ಹಾಗೂ ಇವಿ ಬಸ್ ಚಾಲಕ ಸೇರಿದಂತೆ ಹಲವರನ್ನು ತಕ್ಷಣವೇ ಸಮೀಪದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಭಾಗ್ಯಮ್ಮ ಮತ್ತು ಚಾಲಕನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಮತ್ತು ಬಿಎಂಟಿಸಿ ಉನ್ನತ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಆದರೆ, “ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಅತ್ಯಂತ ದುಬಾರಿಯಾಗಿದೆ. ನಾವು ಬಡವರಾಗಿದ್ದು ನಮ್ಮ ಬಳಿ ಹಣವಿಲ್ಲ. ಅಪಘಾತಕ್ಕೆ ಬಿಎಂಟಿಸಿ ನಿರ್ಲಕ್ಷ್ಯವೇ ಕಾರಣವಾಗಿರುವುದರಿಂದ ಸಂಸ್ಥೆಯ ಕಡೆಯಿಂದಲೇ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು” ಎಂದು ಗಾಯಾಳುಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.