ಬೆಂಗಳೂರು, ಮಾರ್ಚ್ 24: ನಗರದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ‘ಬೆಂಗಳೂರು ಕರಗ ಶಕ್ತ್ಯುತ್ಸವ’ಕ್ಕೆ ಮಂಗಳವಾರ ಮುಂಜಾನೆ ಚಾಲನೆ ದೊರಕಿತು. ನಗರದ ಹೃದಯಭಾಗದಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 11 ದಿನಗಳ ಉತ್ಸವಕ್ಕೆ ಅಧಿಕೃತವಾಗಿ ನಾಂದಿ ಹಾಡಲಾಯಿತು.

ಮುಂಜಾನೆ ಶುಭ ಮುಹೂರ್ತದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಪ್ರಮುಖರು, ಕುಲಬಾಂಧವರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದರು. ದ್ರೌಪದಿ ದೇವಿಯ ಜಯಘೋಷಗಳ ಮಧ್ಯೆ ದೇವಾಲಯದ ಆವರಣ ಭಕ್ತಿಭಾವದಿಂದ ಮೈಮರೆಯಿತು. ಈ ಬಾರಿಯ ಕರಗವನ್ನು ಜ್ಞಾನೇಂದ್ರಸ್ವಾಮಿ ಹೊರುವ ಸಾಧ್ಯತೆ ಇದ್ದು, ಅವರು ಈಗಾಗಲೇ ಕಟ್ಟುನಿಟ್ಟಿನ ವ್ರತಾಚರಣೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕರಗ ಸಾಗುವ ಮಾರ್ಗದಲ್ಲಿ ಮೈಸೂರು ದಸರಾ ಮಾದರಿಯ ವಿದ್ಯುತ್ ದೀಪಾಲಂಕಾರಕ್ಕೆ ಬಿಬಿಎಂಪಿ ವಿಶೇಷ ಒತ್ತು ನೀಡಿದ್ದು, ಅವೆನ್ಯೂ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಹಬ್ಬದ ಕಳೆ ಮೂಡಿದೆ .
ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿದ್ಧತೆಗಳ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ಸವದ ಪ್ರಮುಖ ಅಂಗವಾಗಿ ಮಾರ್ಚ್ 30ರಂದು ‘ಹಸಿ ಕರಗ’ ನಡೆಯಲಿದ್ದು, ಏಪ್ರಿಲ್ 1ರ ಮಧ್ಯರಾತ್ರಿ ವಿಶ್ವಪ್ರಸಿದ್ಧ ‘ಬೆಂಗಳೂರು ಕರಗ’ ಮೆರವಣಿಗೆ ಜರುಗಲಿದೆ. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಸ್ತಾನ್ ಸಾಹೇಬ್ ದರ್ಗಾಕ್ಕೆ ಭೇಟಿ ನೀಡಿ ಧಾರ್ಮಿಕ ಸೌಹಾರ್ದತೆಯ ಸಂದೇಶ ಸಾರಲಿದೆ. ನಗರದ ಸಂಸ್ಕೃತಿ, ಭಕ್ತಿ ಹಾಗೂ ಪರಂಪರೆಯ ಸಂಕೇತವಾಗಿರುವ ಈ ಕರಗ ಶಕ್ತ್ಯುತ್ಸವಕ್ಕೆ ದೇಶ-ವಿದೇಶಗಳಿಂದಲೂ ಭಕ್ತರು ಆಗಮಿಸುವ ನಿರೀಕ್ಷೆ ಇದೆ.