ಬೆಂಗಳೂರು,\ತಮಿಳುನಾಡು ಮಾರ್ಚ್ 10: ಅಮೇರಿಕಾ ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಸಂಘರ್ಷವು ಇದೀಗ ಭಾರತದ ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ಸಾಗಣೆ ಮಾರ್ಗಗಳು ಅಸ್ತವ್ಯಸ್ತಗೊಂಡಿರುವುದರಿಂದ ಬೆಂಗಳೂರು, ಚೆನ್ನೈ ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ.
ಅನಿಲ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಮಾರ್ಚ್ 10ರಿಂದ ನಗರದಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಮುಚ್ಚಲ್ಪಡುವ ಸಾಧ್ಯತೆಯಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘ ಎಚ್ಚರಿಸಿದೆ. “ದೈನಂದಿನ ಊಟಕ್ಕಾಗಿ ಹೋಟೆಲ್ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇದರಿಂದ ಭಾರಿ ತೊಂದರೆಯಾಗಲಿದೆ” ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಕೃಷ್ಣರಾಜ್, “ಹೋಟೆಲ್ಗಳನ್ನು ಬಂದ್ ಮಾಡುವುದು ನಮ್ಮ ನಿರ್ಧಾರವಲ್ಲ. ಆದರೆ ಗ್ಯಾಸ್ ಸಿಲಿಂಡರ್ ಪೂರೈಕೆ ಏಕಾಏಕಿ ಕಡಿಮೆಯಾದರೆ ಅಡುಗೆ ನಡೆಸುವುದು ಕಷ್ಟವಾಗುತ್ತದೆ. ಮೊದಲೇ ಮುನ್ಸೂಚನೆ ನೀಡಿದ್ದರೆ ಈ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ,” ಎಂದು ತಿಳಿಸಿದ್ದಾರೆ.
ನಗರದಲ್ಲಿನ ಅನೇಕ ಹೋಟೆಲ್ಗಳ ಬಳಿ ಕೆಲವೇ ಗಂಟೆಗಳಿಗಷ್ಟೇ ಸಾಕಾಗುವಷ್ಟು ಗ್ಯಾಸ್ ಸಿಲಿಂಡರ್ ಸಂಗ್ರಹ ಉಳಿದಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಪೂರೈಕೆ ಮುಂದುವರಿಯದಿದ್ದರೆ ಅನಿವಾರ್ಯವಾಗಿ ಕೆಲವು ಹೋಟೆಲ್ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಬೇಕಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. “ನಾವು ಬಂದ್ಗೆ ಕರೆ ನೀಡಿಲ್ಲ. ಆದರೆ ಗ್ಯಾಸ್ ಇಲ್ಲದೆ ಅಡುಗೆ ಮಾಡುವುದು ಸಾಧ್ಯವಿಲ್ಲ. ಆಹಾರ ಸಿದ್ಧಪಡಿಸಲು ಸಾಧ್ಯವಾಗದಿದ್ದರೆ ಹೋಟೆಲ್ಗಳನ್ನು ಬಂದ್ ಮಾಡಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ,” ಎಂದು ಕೃಷ್ಣರಾಜ್ ಹೇಳಿದ್ದಾರೆ.

ಹೋಟೆಲ್ ಮಾಲೀಕರ ಪ್ರಕಾರ, ಪೂರೈಕೆಯಲ್ಲಿ ಬದಲಾವಣೆ ಆಗುವ ಸಂದರ್ಭಗಳಲ್ಲಿ ಕನಿಷ್ಠ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕಾಗಿತ್ತು. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಸಿಲಿಂಡರ್ ಸರಬರಾಜು ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಗೊಂದಲಕ್ಕೀಡಾಗಿದ್ದಾರೆ. ನಗರದಲ್ಲಿ ಸಾವಿರಾರು ಸಣ್ಣ ಹಾಗೂ ಮಧ್ಯಮ ಮಟ್ಟದ ಹೋಟೆಲ್ಗಳು ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಮೇಲೆಯೇ ಅವಲಂಬಿತವಾಗಿದ್ದು, ಸಮಸ್ಯೆ ಮುಂದುವರಿದರೆ ಉದ್ಯಮಕ್ಕೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದೇ ವೇಳೆ ತಮಿಳುನಾಡಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದು, ಗ್ಯಾಸ್ ಕೊರತೆಯಿಂದ ಅನೇಕ ರೆಸ್ಟೋರೆಂಟ್ಗಳು ಸಂಕಷ್ಟಕ್ಕೆ ಸಿಲುಕಿವೆ. ಚೆನ್ನೈ ಹೋಟೆಲ್ ಅಸೋಸಿಯೇಷನ್ ತಮಿಳುನಾಡು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ವಿತರಕರು “ನೋ ಸ್ಟಾಕ್” ಎಂದು ತಿಳಿಸುತ್ತಿರುವುದರಿಂದ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸಮರ್ಪಕ ಪ್ರಮಾಣದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಚೆನ್ನೈ ಹೋಟೆಲ್ ಅಸೋಸಿಯೇಷನ್ ಸರ್ಕಾರವನ್ನು ಒತ್ತಾಯಿಸಿದೆ. ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಬೆಂಗಳೂರು ಮತ್ತು ತಮಿಳುನಾಡಿನ ಅನೇಕ ಹೋಟೆಲ್ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಉದ್ಯಮಿಗಳಲ್ಲಿ ವ್ಯಕ್ತವಾಗಿದೆ.
ಕೇಂದ್ರಕ್ಕೆ ಉದ್ಯಮದ ಮೊರೆ: ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ‘ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ’ (FHRAI), ತೈಲ ಕಂಪನಿಗಳಿಗೆ ಸ್ಪಷ್ಟ ಆದೇಶ ನೀಡುವಂತೆ ಒತ್ತಾಯಿಸಿದೆ. ಸರ್ಕಾರವು ಸಂಸ್ಕರಣಾಗಾರಗಳಿಗೆ ಎಲ್ಪಿಜಿ ಉತ್ಪಾದನೆ ಹೆಚ್ಚಿಸಲು ಆದೇಶಿಸಿದೆಯಾದರೂ, ನೆಲಮಟ್ಟದಲ್ಲಿ ವಿತರಕರು ಸಿಲಿಂಡರ್ ನೀಡಲು ನಿರಾಕರಿಸುತ್ತಿರುವುದು ಬಿಕ್ಕಟ್ಟನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.