ಬೆಂಗಳೂರು ನವೆಂಬರ್ 21: ಎಟಿಎಂಗೆ ಹಣ ತುಂಬುವ ವಾಹನದಿಂದ 7 ಕೋಟಿ ಹಣ ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಇಡೀ ಪ್ರಕರಣದ ಸೂತ್ರಧಾರ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಅವರನ್ನು ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಕುಂಬಳಗೋಡು ಸೇರಿದಂತೆ ಹಲವು ಕಡೆ ಕಾನ್‌ಸ್ಟೆಬಲ್ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ. ಕಾನ್‌ಸ್ಟೆಬಲ್ ಮೇಲೆ ಅನುಮಾನ ಬಲವಾಗಿದೆ. ಕಮ್ಮನಹಳ್ಳಿ, ಕಲ್ಯಾಣನಗರದ ಯುವಕರನ್ನು ದರೋಡೆಗೆ ಸಿದ್ಧಪಡಿಸಿದ್ದ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ತರಬೇತಿ ನೀಡಿದ್ದರು.
ಕಾನ್‌ಸ್ಟೆಬಲ್ ಸೂಚನೆಯಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡವೇ ₹ 7.11 ಕೋಟಿ ದರೋಡೆ ಮಾಡಿದೆ. ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಬೆಂಬಲ ನೀಡಿದ್ದ, ಕದ್ದ ಹಣವನ್ನು ನಗರದ ಗಡಿಪ್ರದೇಶದಲ್ಲಿ ಬಚ್ಚಿಟ್ಟು ಪರಾರಿ ಆಗಿದ್ದಾರೆ. ಪೊಲೀಸರ ತನಿಖೆ ಯಾವ ರೀತಿ ನಡೆಯುತ್ತದೆ? ಹೇಗೆ ತಪ್ಪಿಸಿಕೊಳ್ಳಬೇಕು? ಎಂಬೆಲ್ಲ ವಿಚಾರವನ್ನು ಚರ್ಚಿಸಿ ಅಣ್ಣಪ್ಪ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಇನ್ನು, ಇದೇ ವೇಳೆ ದರೋಡೆ ಹಣದ ಆಸೆಗಾಗಿ ಸಂಸ್ಥೆಯ ಗೋಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇರೆಗೆ ಸಿಎಂಎಸ್ ಏಜೆನ್ಸಿಯ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ತಾಂತ್ರಿಕ ವಿಭಾಗ, ಭದ್ರತಾ ವಿಭಾಗದ ಅಧಿಕಾರಿ-ಸಿಬ್ಬಂದಿ, ಇಬ್ಬರು ಕಸ್ಟೋಡಿಯನ್ ಕೂಡ ಇದ್ದಾರೆ.
ದರೋಡೆಕೋರರ ಪತ್ತೆಗೆ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಇನ್ನೋವಾ ಕಾರು ಗುರುವಾರ ತಿರುಪತಿಯಲ್ಲಿ ಸಿಕ್ಕಿದೆ. ಅಲ್ಲದೇ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಧ್ಯೆ ಸಿದ್ದಾಪುರ ಪೊಲೀಸರು ಡೇವಿಡ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.



