ನವದೆಹಲಿ ,ಏಪ್ರಿಲ್ 03: ಮಾಲ್ಡಾದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ಏಳು ವಿಶೇಷ ತೀವ್ರ ಪರಿಷ್ಕರಣಾ (SIR) ಅಧಿಕಾರಿಗಳ ಘೇರಾವ್ಗೆ ಕಾರಣವಾದ ಆರೋಪ ಹೊತ್ತಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ನಾಯಕ ಮೊಫಕ್ಕೆರುಲ್ ಇಸ್ಲಾಂ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ .

ವೃತ್ತಿಯಲ್ಲಿ ವಕೀಲರಾಗಿರುವ ಮತ್ತು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಇಟಾಹಾರ್ನಿಂದ AIMIM ಅಭ್ಯರ್ಥಿಯಾಗಿರುವ ಇಸ್ಲಾಂ ಅವರನ್ನು ಮಾಲ್ಡಾ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಬಣ್ಣಿಸಲಾಗುತ್ತಿದೆ ಮತ್ತು ಅವರು ರಾಜ್ಯದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ಸಮಗ್ರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಘಟನೆಯನ್ನು ನ್ಯಾಯಾಂಗದ ಮೇಲಿನ ವ್ಯವಸ್ಥಿತ ದಾಳಿ ಎಂದು ಬಣ್ಣಿಸಿರುವ ನ್ಯಾಯಾಲಯವು, ರಾಜ್ಯದಲ್ಲಿ ಇಂತಹ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಕಳೆದ ಏಪ್ರಿಲ್ 1 ರಂದು ಮಾಲ್ಡಾದ ಇಂಗ್ಲಿಷ್ ಬಜಾರ್ನಲ್ಲಿ ಮತದಾರರ ಪಟ್ಟಿಯಿಂದ ಕೆಲವು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪದ ಮೇಲೆ ಸಾವಿರಾರು ಪ್ರತಿಭಟನಾಕಾರರು ಕಚೇರಿಯನ್ನು ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ ಒಟ್ಟು ಏಳು ನ್ಯಾಯಾಂಗ ಅಧಿಕಾರಿಗಳನ್ನು ಸುಮಾರು 10 ಗಂಟೆಗಳ ಕಾಲ ಕಚೇರಿಯೊಳಗೆ ಕೂಡಿಹಾಕಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಅಧಿಕಾರಿಗಳಿಗೆ ಆಹಾರ, ನೀರು ಅಥವಾ ವೈದ್ಯಕೀಯ ನೆರವು ಸಿಗದಂತೆ ತಡೆದಿದ್ದಲ್ಲದೆ, ಕಚೇರಿಯ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿ ಜೀವ ಬೆದರಿಕೆ ಹಾಕಲಾಗಿತ್ತು. ಸ್ಥಳೀಯ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ವಿಫಲರಾದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್ಗೆ ಪತ್ರ ಬರೆದು ತುರ್ತು ಮಧ್ಯಪ್ರವೇಶಕ್ಕೆ ವಿನಂತಿಸಿದ್ದರು.
ವಿಷಯದ ಗಂಭೀರತೆಯನ್ನು ಅರಿತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು ಏಪ್ರಿಲ್ 1 ರ ಮಧ್ಯರಾತ್ರಿಯೇ ಆದೇಶ ಹೊರಡಿಸಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಸ್ಥಳಕ್ಕೆ ರವಾನಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿತ್ತು. ಅರೆಸೇನಾ ಪಡೆಗಳು ಸ್ಥಳಕ್ಕೆ ತಲುಪಿ ಪ್ರತಿಭಟನಾಕಾರರನ್ನು ಚದುರಿಸಿ ಅಧಿಕಾರಿಗಳನ್ನು ಸುರಕ್ಷಿತವಾಗಿ ಹೊರತಂದಿದ್ದವು. ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದೊಂದು ಸಂಪೂರ್ಣ ಆಡಳಿತಾತ್ಮಕ ವೈಫಲ್ಯ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಚುನಾವಣಾ ಆಯೋಗವು ಎನ್ಐಎಗೆ ಅಧಿಕೃತವಾಗಿ ಪತ್ರ ಬರೆದಿದ್ದು, ಏಪ್ರಿಲ್ 3 ರ ಶುಕ್ರವಾರದಂದು ಎನ್ಐಎ ವಿಶೇಷ ತಂಡವು ತನಿಖೆಗಾಗಿ ಪಶ್ಚಿಮ ಬಂಗಾಳಕ್ಕೆ ತಲುಪಲಿದೆ. ಇದೇ ವೇಳೆ ಕರ್ತವ್ಯ ಲೋಪ ಎಸಗಿದ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಮಾಲ್ಡಾ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಏಪ್ರಿಲ್ 6 ರಂದು ನಡೆಯಲಿರುವ ವಿಚಾರಣೆಗೆ ಆನ್ಲೈನ್ ಮೂಲಕ ಹಾಜರಿರಲು ಆದೇಶಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜಾರ್ಖಂಡ್ ಮತ್ತು ಒಡಿಶಾದಿಂದ ಹೆಚ್ಚುವರಿ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಇನ್ನು ಮುಂದೆ ಇಂತಹ ಕೇಂದ್ರಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.