ಬೆಳ್ತಂಗಡಿ, ಜುಲೈ 07: ಮುಂಗಾರು ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣವಾದ ‘ಗಡಾಯಿಕಲ್ಲು’ (ನರಸಿಂಹಗಡ) ಚಾರಣವನ್ನು ಜುಲೈ 8ರಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಗಡಾಯಿಕಲ್ಲು ಕಡಿದಾದ ಬಂಡೆ ದಾರಿಗಳು ಅತ್ಯಂತ ಜಾರಿಕೆಯಾಗಿದ್ದು, ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸಮುದ್ರ ಮಟ್ಟದಿಂದ ಸುಮಾರು 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಏರಲು ಕೇವಲ ಕಲ್ಲಿನ ಮೆಟ್ಟಿಲುಗಳೇ ಆಧಾರವಾಗಿವೆ. ಮಳೆಗಾಲದಲ್ಲಿ ಈ ಮೆಟ್ಟಿಲುಗಳ ಮೇಲೆ ಪಾಚಿ ಕಟ್ಟುವುದರಿಂದ ಮತ್ತು ಮಂಜು ಕವಿದ ವಾತಾವರಣ ಇರುವುದರಿಂದ ಚಾರಣ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ.
“ಪ್ರವಾಸಿಗರ ಜೀವ ರಕ್ಷಣೆ ನಮಗೆ ಮುಖ್ಯ. ಹೀಗಾಗಿ ಜುಲೈ 8ರಿಂದ ಮುಂದಿನ ಆದೇಶದವರೆಗೆ ಸಾರ್ವಜನಿಕರು ಮತ್ತು ಚಾರಣಿಗರಿಗೆ ಗಡಾಯಿಕಲ್ಲು ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು” ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಮುಂಗಾರು ಮಳೆ ಕಡಿಮೆಯಾದ ಬಳಿಕವಷ್ಟೇ ಚಾರಣಕ್ಕೆ ಮತ್ತೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.