ಬೆಳ್ತಂಗಡಿ ಎಪ್ರಿಲ್ 20: ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸೋಮವಾರ ಸಂಜೆ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಸೋಮವಾರ ಸಂಜೆ ಸಂಭವಿಸಿದ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಮತ್ತು ಬಿರುಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಜಿರೆ, ಮುಂಡಾಜೆ ಹಾಗೂ ಕುಳೂರು ಭಾಗದಲ್ಲಿ ಮರಗಳು ಧರಾಶಾಹಿಯಾಗಿದ್ದು, ಹಲವು ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ಅಪಾರ ಹಾನಿ ಸಂಭವಿಸಿದೆ.

ಉಜಿರೆ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ರೆಂಬೆ ಮುರಿದು ಬಿದ್ದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿಗೆ ತೀವ್ರ ಹಾನಿಯಾಗಿದೆ. ಮುಂಡಾಜೆಯ ಚಾಮುಂಡಿ ನಗರದಲ್ಲಿ ರಾಮಕ್ಕ ಎಂಬವರ ಮನೆ ಸಂಪೂರ್ಣವಾಗಿ ನಾಶವಾಗಿದ್ದು, ಪರಿಸರದ ಇತರೆ ನಾಲ್ಕು ಮನೆಗಳು ಭಾಗಶಃ ಜಖಂಗೊಂಡಿವೆ.
ಅಂಬಡಬೆಟ್ಟು ಬಳಿ ನೂತನ ಸೇತುವೆ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಮಳೆಗೆ ಕುಸಿದಿದ್ದು, ಘನ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ಅಡಕೆ ಮತ್ತು ರಬ್ಬರ್ ಗಿಡಗಳು ನೆಲಕ್ಕುರುಳಿದ್ದು, ತಾಲೂಕಿನಾದ್ಯಂತ ವಿದ್ಯುತ್ ಮತ್ತು ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ.
ಅಚಾನಕ್ ಆಗಿ ಸುರಿದ ಮಳೆಯಿಂದಾಗಿ ಬಿಸಿಲಿನ ಧಗೆಯಿಂದ ಬಳಲುತ್ತಿದ್ದ ಜಿಲ್ಲೆಯ ಜನತೆಗೆ ಕೊಂಚ ತಂಪಿನ ವಾತಾವರಣ ಸಿಕ್ಕಿತಂತಾಗಿದೆ. ಮಳೆ ಸುರಿದ ಹಿನ್ನಲೆಯಲ್ಲಿ ಕೆಲವೆಡೆ ಒಣಗಲು ಹಾಕಿದ ಅಡಿಕೆಯೂ ಕೂಡಾ ಒದ್ದೆಯಾಗಿದ್ದು, ಇದರಿಂದಾಗಿ ಕೃಷಿಕರಿಗೂ ಸಮಸ್ಯೆಯಾಗಿದೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಕೊಣಾಜೆ,ಮರ್ದಾಳ ಭಾಗದಲ್ಲಿ ಭಾರೀ ಮಳೆಯ ಜೊತೆಗೆ ಭಾರೀ ಗಾಳಿಯೂ ಬೀಸಿದ್ದು, ಗಾಳಿಗೆ ಕೆಲವು ತೋಟಗಳಲ್ಲಿ ಅಡಿಕೆ ಮರಗಳೂ ತುಂಡಾಗಿ ಬಿದ್ದ ಘಟನೆಯೂ ನಡೆದಿದೆ.