ಬೆಳ್ತಂಗಡಿ, ಮಾರ್ಚ್ 28: ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆ ಸುರಿದ ಭಾರೀ ಗಾಳಿ-ಮಳೆ ಅನಾಹುತಗಳ ಸರಮಾಲೆಯನ್ನೇ ಉಂಟುಮಾಡಿದ್ದು, ಸಾರ್ವಜನಿಕ ಸೌಕರ್ಯಗಳು ಹಾಗೂ ಮನೆಗಳಿಗೆ ಅಪಾರ ಹಾನಿ ಉಂಟಾಗಿದೆ.

ಬೆಳ್ತಂಗಡಿ ಪೇಟೆ ಸಮೀಪದ ಸಂತಕಟ್ಟೆಯಲ್ಲಿರುವ ಆಟೋ ಸ್ಟ್ಯಾಂಡ್ ಮೇಲ್ಚಾವಣಿ ಬಿರುಗಾಳಿಯ ಅಬ್ಬರಕ್ಕೆ ಕುಸಿದಿದೆ. ಈ ವೇಳೆ ಪಾರ್ಕ್ ಮಾಡಲಾಗಿದ್ದ ಒಂದು ರಿಕ್ಷಾ ಹಾನಿಗೊಳಗಾಗಿದೆ.

ಕಕ್ಕಿಂಜೆ ಪೇಟೆಯಲ್ಲಿ ಗಾಳಿಯ ರಭಸಕ್ಕೆ ಮರ ಉರುಳಿ ಬಿದ್ದು, ವಿದ್ಯುತ್ ಕಂಬ ರಸ್ತೆಗೆ ಅಪ್ಪಳಿಸಿದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಳೆಂಜ ಗ್ರಾಮದ ಬೀಜದಡಿಪಾದೆ ಪ್ರದೇಶದಲ್ಲಿ ರುಕ್ಮಿಣಿ ಅವರ ಮನೆಗೆ ತೆಂಗಿನ ಮರ ಬಿದ್ದು ಗಂಭೀರ ಹಾನಿಯಾಗಿದೆ. ಘಟನೆಯ ವೇಳೆ ಮನೆಯವರು ಒಳಗಡೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೆರಿಯಾ ಗ್ರಾಮದ ಗಂಡಿಬಾಗಿಲು-ಪೊಕ್ಕಂದಾಡಿ ನಿವಾಸಿ ದೇವಸ್ಯ ಅವರ ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಇದಲ್ಲದೆ, ಉಜಿರೆಯ ಪೆರೋಡಿತ್ತಾಯ ಕಟ್ಟೆ ಪ್ರದೇಶದಲ್ಲಿ ರಫಿಕ್ ಅವರ ಮನೆ ಮೇಲ್ಚಾವಣಿಯ ಮೇಲೆ ಮರ ಬಿದ್ದು ಗಾಳಿ-ಮಳೆಯ ಅಬ್ಬರಕ್ಕೆ ಹಾನಿಯಾಗಿದೆ. ತಾಲೂಕಿನ ಇತರ ಭಾಗಗಳಲ್ಲಿಯೂ ಗಾಳಿ-ಮಳೆಯ ಪರಿಣಾಮದಿಂದ ಹಾನಿ ಸಂಭವಿಸಿರುವ ಬಗ್ಗೆ ವರದಿಗಳು ಲಭ್ಯವಾಗುತ್ತಿವೆ.