ಬೆಳ್ತಂಗಡಿ ಜುಲೈ 01: ಕುವೆಟ್ಟು ಗ್ರಾಮದ ಗುರುವಾಯನಕೆರೆ ಖಾಸಗಿ ವಿದ್ಯುತ್ ಸಬ್ ಸ್ಟೇಷನ್ ಸಮೀಪ ಬುಧವಾರ (ಜುಲೈ 01) ಅವಿವಾಹಿತ ಯುವಕನೋರ್ವನ ಮೃತದೇಹ ತೀವ್ರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲನಿ ನಿವಾಸಿ ಶರೀಫ್ ಕೆ. ಎಂಬವರ ಪುತ್ರ ಮುಸ್ತಾಕ್ (27) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಮೃತ ಯುವಕ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಆತನ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೂನ್ 30ರಂದು ಮುಸ್ತಾಕ್ ರನ್ನು ಅವರ ಸಹೋದರ ಮನಾಸಿರ್ ಎಂಬವರು ತಮ್ಮ ಬೈಕ್ನಲ್ಲಿ ಕಲ್ಲೇರಿಯಿಂದ ಮದ್ದಡ್ಕದಲ್ಲಿ ಪಾರ್ಕ್ ಮಾಡಲಾಗಿದ್ದ ಲಾರಿಯ ಬಳಿ ಬಿಟ್ಟು ಹೋಗಿದ್ದರು. ಅದಾದ ಬಳಿಕ ಮುಸ್ತಾಕ್ ನಾಪತ್ತೆಯಾಗಿದ್ದರು. ಆದರೆ, ಬುಧವಾರ ಬೆಳಗ್ಗೆ ಕುವೆಟ್ಟು ಗ್ರಾಮದ ಶಕ್ತಿನಗರದ ಸಮೀಪವಿರುವ ವಿದ್ಯುತ್ ಸಬ್ ಸ್ಟೇಷನ್ನ ನಿರ್ಜನ ಪ್ರದೇಶದಲ್ಲಿ ಮುಸ್ತಾಕ್ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಬೇಕಿದೆ.