ಬೆಳ್ತಂಗಡಿ ನವೆಂಬರ್ 22: ಬೈಕ್ ಕಳ್ಳತನ ಮಾಡಿ ಅದರ ನಂಬರ್ ಪ್ಲೆಟ್ ತೆಗೆದು ತಿರುಗಾಡುತ್ತಿದ್ದ ಇಬ್ಬರು ಕಳ್ಳರನ್ನು ವೇಣೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವೇಣೂರು ಗ್ರಾಮದ ಕೆರೆಕೋಡಿ ನಿವಾಸಿ ಮಹಮ್ಮದ್ ಇರ್ಷಾದ್ (25) ಮತ್ತು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ಸಾದಿಕ್ ಖಾನ್ (26) ಎಂದು ಗುರುತಿಸಲಾಗಿದೆ.

ನವೆಂಬರ್ 11ರಂದು ರಾತ್ರಿ ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ ಅವರು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಪಾಣೂರು ಗುರುನಾರಾಯಣ ಸರ್ಕಲ್ ಬಳಿ ಬೈಕ್ ನಿಲ್ಲಿಸಿ ಹೋಗಿದ್ದರು. ನ.12ರಂದು ಬಂದು ನೋಡಿದಾಗ ಬೈಕ್ ಇರಲಿಲ್ಲ. ಈ ಬಗ್ಗೆ ನ.13ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ವೇಣೂರು ಪಿಎಸ್ಐ ಓಮನ ಮತ್ತು ಸಿಬ್ಬಂದಿ ನ.20ರಂದು ವೇಣೂರು ಗ್ರಾಮದ ಕೆರೆಕೋಡಿಯಲ್ಲಿ ಕರ್ತವ್ಯದ ವೇಳೆ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳು ಇರಲಿಲ್ಲ. ಬೈಕ್ ವಶಕ್ಕೆ ಪಡೆದುಕೊಂಡು ಇಬ್ಬರನ್ನು ವಿಚಾರಣೆ ನಡೆಸಿದಾಗ ಗುರುನಾರಾಯಣ ಸರ್ಕಲ್ ಬಳಿ ನಿಲ್ಲಿಸಿದ ಬೈಕ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲಿ ಇರ್ಷಾದ್ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಮತ್ತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಬ್ಬರಿಗೂ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.