ಬೆಳ್ತಂಗಡಿ,ಫೆಬ್ರವರಿ 15: ಮೃತಪಟ್ಟ ಅಜ್ಜಿಯ ತಿಥಿಗೆ ಅವರಿಗೆ ಇಷ್ಟವಾದ ಆಮೆಯನ್ನು ಪದಾರ್ಥ ಮಾಡಿ ಬಡಿಸಲು ನದಿಯಲ್ಲಿ ಅಕ್ರಮವಾಗಿ ಆಮೆಗಳನ್ನು ಬೇಟೆಯಾಡಿ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದ ನಾಲ್ವರನ್ನು ಆಮೆಗಳ ಸಹಿತ ಬೆಳ್ತಂಗಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಅಂಚೆ,ಪೆರ್ಡಲ್ ಗ್ರಾಮದ ನಿರ್ಜಲ್ ನಿವಾಸಿ ಮಣಿಕಂಠ(42), ಮಂಗಳೂರು ನಗರದ ಮುಲ್ಕಿ ತಾಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ(54), ಮೂಡಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ಮಕ್ಕಿ ನಿವಾಸಿ ವಿಘ್ನೇಶ್(32), ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್(35) ಎಂದು ಗುರುತಿಸಲಾಗಿದೆ
ದಾಳಿ ವೇಳೆ ಆರೋಪಿಗಳಿಂದ ನಾಲ್ಕು ಸುಟ್ಟ ಆಮೆಯನ್ನು ಜಪ್ತಿ ಮಾಡಿ ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಫೆಬ್ರವರಿ 13 ರಂದು ಆರೋಪಿಗಳು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಂಟಿನಿ ನಿವಾಸಿ ಸಂಬಂಧಿ ಅಜ್ಜಿಯಾದ ದೇವಮ್ಮ ಎಂಬವರ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು.
ಅಜ್ಜಿಯ ಪ್ರೀತಿಯ ಆಮೆ ಪದಾರ್ಥ ಮಾಡಿ ತಿಥಿ ಕಾರ್ಯಕ್ರಮದಲ್ಲಿ ಬಡಿಸಲು ತಯಾರಿ ಮಾಡಿದ ನಾಲ್ವರು ಸಂಬಂಧಿಕರು ಫೆಬ್ರವರಿ14 ರಂದು ಬೆಳ್ತಂಗಡಿಯ ಸೋಮವತಿ ನದಿಗೆ ಆಮೆಗಳನ್ನು ಬೇಟೆಯಾಡಲು ಬಂದಾಗ ಆಮೆ ಸಹಿತ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ಇನ್ಸ್ಪೆಕ್ಟರ್ ಬಿ.ಜಿ.ಸುಬ್ಬಾಪುರ ಮಠ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ನೇತೃತ್ವದ ಸಿಬ್ಬಂದಿ ಎಎಸ್‌ಐ ಕುಶಾಲಪ್ಪ, ಹೆಡ್ ಕಾನ್ಟೇಬಲ್ ಪ್ರಮೋದ್, ಪಂಪಾಪತಿ, ಪ್ರಕಾಶ್, ಶ್ವೇತಾ, ಸವಿತಾ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಡಿ.ಆರ್.ಎಫ್.ಒ ಕಿರಣ್ ಪಾಟೀಲ್, ಸಂದೀಪ್, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ದಿವಕರ್ ಹಾಗೂ ವಾಹನ ಚಾಲಕ ಕುಶಲಪ್ಪ ಗೌಡ ಭಾಗವಹಿಸಿದರು.



