ಜನಮನ ಸೂರೆಗೊಳ್ಳುವ ತುಳುನಾಡಿನ ಹುಲಿವೇಷ

ಮಂಗಳೂರು, ಅಕ್ಟೋಬರ್ 08: ನವರಾತ್ರಿ ಹಬ್ಬದಂದು ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ಮೂಲಕ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಪೂರೈಸುತ್ತಾರೆ. ಈ ನವರಾತ್ರಿ ಸಂದರ್ಭದಲ್ಲಿ ವೇಷಭೂಷಣಗಳನ್ನು ಹಾಕಿಕೊಂಡು ಜನರನ್ನು ಆಕರ್ಷಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹುದು.

ಕರಾವಳಿಯಲ್ಲಿ ನವರಾತ್ರಿ ಉತ್ಸವಕ್ಕೆ ತನ್ನದೇ ಆದ ವೈಶಿಷ್ಟ್ಯ ವಿದೆ. ಅದರಲ್ಲೂ ಈ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಕುಣಿಯಲಾಗುವ ಹುಲಿ ವೇಷ ಅದರದೇ ಆದ ಮನ್ನಣೆ, ಗೌರವವಿದೆ. ಹುಲಿವೇಷಕ್ಕೂ ತುಳುನಾಡಿನ ಸಂಸ್ಕೃತಿಗೂ ಅವಿನಾಭಾವ ಸಂಬಂಧವೂ ಇದೆ. ಹುಲಿಯೇರಿ ಬಂದು ಅಸುರರನು ಸಂಹರಿಸಿದ ದೇವಿಯ ಉತ್ಸವದಲ್ಲಿ ಹುಲಿವೇಷಕ್ಕೆ ಭಾರೀ ಗೌರವ, ಮನ್ನಣೆಯಿದೆ. ತುಳುನಾಡಿನಲ್ಲಿ ಹುಲಿವೇಷವನ್ನು ಹರಕೆ ರೂಪದಲ್ಲಿ ಹಾಕಿಕೊಂಡು ಬರುವ ಸಂಪ್ರದಾಯ ತಲೆತಲಾಂತರದಲ್ಲಿ ನಡೆದುಕೊಂಡು ಬರುತ್ತಿದೆ.

ಅಸೌಖ್ಯ, ತೊಂದರೆ ಮನುಷ್ಯನ ಜೀವನದಲ್ಲಿ ಬರೋದು ಸಹಜವಾಗಿದ್ದು, ಇಂಥ ಸಂದರ್ಭದಲ್ಲಿ ದೇವಿಯ ಒಲಿಸಿಕೊಳ್ಳುವುದಕ್ಕಾಗಿ ತುಳುನಾಡಿನಲ್ಲಿ ಹುಲಿವೇಷದ ಹರಕೆಯನ್ನು ಹೊತ್ತುಕೊಳ್ಳಲಾಗುತ್ತದೆ. ಹೀಗೆ ಹರಕೆ ರೂಪದಲ್ಲಿ ಹುಲಿವೇಷ ಹಾಕುವ ಹಲವು ತಂಡಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ. ಹುಲಿವೇಷ ಹಾಕುವ ಪ್ರಕ್ರಿಯೆಯೂ ತುಳುನಾಡಿನಲ್ಲಿ ವಿಶೇಷವಾಗಿದೆ. ಹುಲಿವೇಷ ಹಾಕುವ ವೇಷಧಾರಿ ಮಧು-ಮಾಂಸಗಳಿಂದ ದೂರವಿದ್ದು, ಸಾತ್ವಿಕ ಆಹಾರವನ್ನೇ ಬಳಸಬೇಕು ಎನ್ನುವ ನಿಯಮವೂ ಇದೆ.

ಕೆಲವು ತಂಡಗಳು ನವರಾತ್ರಿಯ ಒಂಬತ್ತು ದಿನಗಳೂ ಹುಲಿವೇಷವನ್ನು ಹಾಕುವ ಮೂಲಕ ತಿರುಗಾಟ ನಡೆಸಿದರೆ, ಇನ್ನು ಕೆಲವು ತಂಡಗಳು ನವರಾತ್ರಿಯ ಕೊನೆಯ ಮೂರು ದಿನ ಇಲ್ಲವೇ ಕೊನೆಯ ದಿನದಲ್ಲಿ ವೇಷ ಹಾಕುವ ಮೂಲಕ ತಮ್ಮ ಹರಕೆಯನ್ನು ತೀರಿಸಿಕೊಳ್ಳಲಾಗುತ್ತದೆ.

ಹುಲಿವೇಷಧಾರಿಗಳು ವೇಷಧಾರಣೆಗೆ ಮೊದಲು ದೇವಿಯ ಮೂರ್ತಿಯ ಎದುರು ಹುಲಿವೇಷಕ್ಕೆ ಬಳಸುವಂತಹ ಸಾಮಾಗ್ರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗುತ್ತದೆ. ಬಳಿಕ ದೇವಿಯ ಮುಂದೆ ಪ್ರಮುಖ ವೇಷಧಾರಿಯು ತನ್ನ ಹುಲಿ ನೃತ್ಯವನ್ನು ಪ್ರದರ್ಶಿಸುತ್ತಾನೆ. ಆ ಬಳಿಕ ಸಂಜೆಯ ವೇಳೆಗೆ ಹುಲಿವೇಷಧಾರಿಗೆ ಬಣ್ಣ ಬಳಿಯುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ.  ಈ ಬಣ್ಣ ಬಳಿಯುವ ಪ್ರಕ್ರಿಯೆ ರಾತ್ರಿಯಿಡೀ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪ್ರತಿಯೊಬ್ಬ ವೇಷಧಾರಿಯೂ ತನ್ನ ಬಣ್ಣ ಪೂರ್ಣಗೊಳ್ಳುವ ವರೆಗೆ ಸುಮಾರು 4 ಗಂಟೆಗಳ ಕಾಲ ನಿಂತಲ್ಲೇ ನಿಲ್ಲಬೇಕಾಗುತ್ತದೆ.

ಎಲ್ಲಾ ವೇಷಧಾರಿಗಳ ಬಣ್ಣ ಬಳಿಯುವ ಪ್ರಕ್ರಿಯೆ ಮುಗಿದ ಬಳಿಕ ಮತ್ತೊಮ್ಮೆ ಎಲ್ಲಾ ವೇಷಧಾರಿಗಳು ದೇವಿಯ ಮೂರ್ತಿಯ ಮುಂದೆ ಹುಲಿ ನರ್ತನವನ್ನು ಪ್ರದರ್ಶಿಸುತ್ತಾರೆ. ಹೀಗೆ ಸಜ್ಜಾಗುವ ಹುಲಿವೇಷಧಾರಿಗಳು ಆಯಾ ಸ್ಥಳದಲ್ಲಿ ಜರಗುವ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ನೃತ್ಯವನ್ನು ಪ್ರದರ್ಶಿಸುತ್ತಾರೆ.

ಕೆಲವು ತಂಡಗಳು ಹುಲಿವೇಷ ಧರಿಸಿ ಮನೆ ಮನೆಗೆ ತೆರಳಿ ನೃತ್ಯ ಪ್ರದರ್ಶನ ಮಾಡುವುದೂ ಸಾಮಾನ್ಯವಾಗಿದ್ದು, ಮನೆಗಳಿಂದ ಸಿಗುವ ಸಂಭಾವನೆಯಿಂದ ತಮ್ಮ ಖರ್ಚುಗಳನ್ನು ಸರಿದೂಗಿಸುತ್ತಾರೆ. ಇನ್ನು ಕೆಲವು ತಂಡಗಳು ಕೇವಲ ನಿರ್ದಿಷ್ಟ ವ್ಯಕ್ತಿಗಳ ಬಳಿ ಮಾತ್ರ ತೆರಳಿ ತಮ್ಮ ನೃತ್ಯ ಪ್ರದರ್ಶಿಸುವ ಮೂಲಕ ಭಾರೀ ಸಂಭಾವನೆಯನ್ನೂ ಗಿಟ್ಟಿಸಿಕೊಳ್ಳುತ್ತವೆ.

ಇನ್ನು ಕೆಲವು ತಂಡಗಳು ಯಾವುದೇ ಸಂಭಾವನೆಯನ್ನು ಪಡೆಯದೆ, ಕೇವಲ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸೇವೆಯನ್ನು ನೀಡುತ್ತವೆ. ಹುಲಿವೇಷಕ್ಕೂ ಕರಾವಳಿಗೂ ಬಿಡಿಸಲಾರದ ನಂಟಿದೆ. ಇದೇ ಕಾರಣಕ್ಕೆ ಕರಾವಳಿಯ ಹುಲಿವೇಷ ಎಲ್ಲಡೆ ಫೇಮಸ್ ಕೂಡಾ ಆಗಿದೆ. ಆದರೆ ಕಾಲ ಕಳೆದಂತೆ ಹುಲಿವೇಷದ ಸಂಪ್ರದಾಯಗಳೂ ಬದಲಾಗಲಾರಂಭಿಸಿದೆ. ಹರಕೆಗಾಗಿ ಹಾಕಲಾಗುತ್ತಿದ್ದ ಹುಲಿವೇಷಗಳು ಇಂದು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಬಳಕೆಯಾಗುತ್ತಿರುವುದು ಮಾತ್ರ ಕರಾವಳಿಗರ ದುರಂತವೂ ಆಗಿದೆ.

VIDEO