Connect with us

BANTWAL

ಬಂಟ್ವಾಳ: ಗುಡ್ಡ ಕುಸಿದು ಮನೆಗೆ ನುಗ್ಗಿದ ನೀರು

ಬಂಟ್ವಾಳ, ಜೂನ್ 15: ರಾಜ್ಯದಲ್ಲಿ ಮಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಗುಡ್ಡ ಕುಸಿದು  ನಾಲ್ಕು ಮನೆಗಳ ಒಳಗೆ ನೀರು  ನುಗ್ಗಿದ ಘಟನೆ  ಬಂಟ್ವಾಳ  ಪೆರಾಜೆ ಗ್ರಾಮದ ಬುಡೋಳಿ ಸೈಟ್ ಎಂಬಲ್ಲಿ ನಿನ್ನೆ ನಡೆದಿದೆ.

ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡೋಳಿಯ ಜೊಹರಾ ಅಬೂಬಕ್ಕರ್, ನಬೀಶಾ ಬಶೀರ್,  ಅವ್ವಮ್ಮ ಹಾಗೂ  ಸುಲೈಮಾನ್ ಅವರ ಮನೆಯೊಳಗೆ ನುಗ್ಗಿದೆ. ನೀರು ನುಗ್ಗಿದ ರಭಸಕ್ಕೆ  ನಾಲ್ಕು ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ. ಮನೆಯ ಹಿಂಬದಿಯಲ್ಲಿರುವ ಗುಡ್ಡ ಕುಸಿದು ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲದೆ ಮನೆಯಂಗಳದಲ್ಲಿ ಇದ್ದ ಬಾವಿಗೆ ನೀರು ತುಂಬಿದೆ. ಬಾವಿಯಲ್ಲಿ ಮಳೆ ನೀರಿನೊಂದಿಗೆ ಮಣ್ಣು ತುಂಬಿದ್ದು ಬಾವಿ ಸಂಪೂರ್ಣ ಮುಚ್ಚಿಹೋಗಿದೆ.

ಅಲ್ಲೇ ತಾಗಿಕೊಂಡಿರುವ ನಾಲ್ಕು ಮನೆಗಳ ಒಳಗೆ ನೀರು ನುಗ್ಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷ ಉಮ್ಮರ್ , ಸದಸ್ಯರಾದ ಕುಶಾಲಪ್ಪ ಗೌಡ ಮಂಜೊಟ್ಟಿ, ಸುನೀತಾ ಸೇರಿದಂತೆ ಹಲವರು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡರು.

ನಾಲ್ಕು ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರನ್ನು ಹತ್ತಿರದ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಿ ಮನೆಯೊಳಗಿನ ನೀರನ್ನು ತೆಗೆಯುವ ಕೆಲಸ ಮಾಡಿ ಸಮಸ್ಯೆ ಬಗೆಹರಿಸಿದರು.