BANTWAL
ಬಂಟ್ವಾಳ – ಶಾಲೆ ಶಿಕ್ಷಕಿಯರ ನಡುವೆ ಮನಸ್ತಾಪ – ಶಾಲೆಗೆ ಭೇಟಿ ನೀಡಿ ಪೋಷಕರಿಂದ ಶಿಕ್ಷಕಿಯರಿಗೆ ಕ್ಲಾಸ್

ಬಂಟ್ವಾಳ ಫೆಬ್ರವರಿ 15: ಪ್ರತಿದಿನ ಶಾಲೆಯಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರು ಶಿಕ್ಷಕಿಯರಿಗೆ ಶಾಲಾಮಕ್ಕಳ ಪೋಷಕರು ಆಗಮಿಸಿ ಸರಿಯಾಗೇ ಕ್ಲಾಸ್ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಸರಕಾರಿ ಶಾಲೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಸರಕಾರಿ ಶಾಲೆಯಲ್ಲಿ ನಲವತ್ತಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಮೂವರು ಶಿಕ್ಷಕರನ್ನು ಶಿಕ್ಷಣ ಇಲಾಖೆ ನಿಯೋಜಿಸಿತ್ತು, ಮುಖ್ಯ ಶಿಕ್ಷಕಿ ಅನಿತಾ,ಲವಿನಾ ಮತ್ತು ಸುಮಯ್ಯ, ಮುಖ್ಯ ಶಿಕ್ಷಕಿ ಅನಿತಾ ಮತ್ತು ಸುಮಯ್ಯ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದ್ದು, ಈ ಹಿನ್ನಲೆ ಇಬ್ಬರು ಪ್ರತಿದಿನ ಶಾಲೆಯಲ್ಲೇ ಜಗಳವಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದರಿಂದ ಬೇಸತ್ತ ವಿದ್ಯಾರ್ಥಿಗಳಿಂದ ಸೀದಾ ಮನೆಯಲ್ಲಿ ಪೋಷಕರಿಗೆ ದೂರು ನೀಡಿದ್ದಾರೆ. ಮಕ್ಕಳ ದೂರಿನ ಹಿನ್ನಲೆ ಶಾಲೆಗೆ ಭೇಟಿ ನೀಡಿ ಪೋಷಕರು ಶಿಕ್ಷಕಿಯರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ. ಅವರ ಎದುರು ಶಿಕ್ಷಕಿಯರಿಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಬ್ಬರು ಶಿಕ್ಷಕಿಯರಿಗೆ ವಾರ್ನಿಂಗ್ ಕೊಟ್ಟಿದ್ದು, ಮುಂದೆ ಮತ್ತೆ ಗಲಾಟೆ ಆದರೆ ಇಬ್ಬರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.