LATEST NEWS
ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಪ್ರಧಾನ
ಉಡುಪಿ, ನವೆಂಬರ್ 09:ಯುವವಾಹಿನಿ ಉಡುಪಿ ಘಟಕದ ವತಿಯಿಂದ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಪ್ರಧಾನ ಸಮಾರಂಭ ವು ದಿನಾಂಕ 8/11/2020 ರಂದು ಚಿಟ್ಪಾಡಿ ಬೀಡಿನಗುಡ್ಡೆ ಸಮೀಪದ ಶ್ರೀ ಲಕ್ಷ್ಮಿ ಸಭಾ ಭವನದಲ್ಲಿ ಘಟಕದ ಅಧ್ಯಕ್ಷರಾದ ಜಗದೀಶ್ ಕುಮಾರ್ ಸಭಾಧ್ಯಕ್ಷತೆಯಲ್ಲಿ ಜರಗಿತು.
ಜಾನಪದ ಅಧ್ಯಯನಕಾರ,ಶಿಕ್ಷಣ ಚಿಂತಕ, ಸಾಹಿತಿ ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ಅರುಣ್ ಕುಮಾರ್ ಎಸ್ ಆರ್ ರವರಿಗೆ “ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ” ಹಾಗೂ ಕಾರ್ಕಳ ಮುಜೂರು ಹಿರ್ಗಾನ ಹಾಡಿ ಗರೋಡಿ ,ಬೈದೇರುಗಳ ದರ್ಶನಾವೇಶದ ಪಾತ್ರಿ ಲೋಕು ಪೂಜಾರಿಯವರಿಗೆ ” ಬನ್ನಂಜೆ ಬಾಬು ಅಮೀನ್ ಜಾನಪದ ಕಲಾವಿದ ಪ್ರಶಸ್ತಿ ” ನೀಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನ್ನಾಡಿದ ಅರುಣ್ ಕುಮಾರ್, ತುಳುನಾಡಿನ ಮಣ್ಣಿನಲ್ಲಿ ಜಾನಪದದ ಶ್ರೀಮಂತ ಪರಂಪರೆ ಇದೆ. ಭಾಷೆ,ಸಾಹಿತ್ಯ ಆರಾಧನೆ ಕಲೆ, ಸಂಸ್ಕಾರಗಳು, ಸಮ್ಮಿಲಿತಗೊಂಡು ಜನರ ಬದುಕಿನಲ್ಲಿ ಹೊಸ ಆಯಾಮವನ್ನು ಕಂಡುಕೊಂಡಿದೆ. ತುಳುನಾಡಿನ ಗರೋಡಿ ಆರಾಧನೆ ಹಾಗೂ ಆಲಡೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಪುರುಷ ಹಾಗೂ ಸ್ತ್ರೀ ಸ್ವರೂಪದ ಆರಾಧನೆಗಳ ಪ್ರತೀಕವಾದ ಆಲಡೆಗಳಲ್ಲಿ ಅವಜ್ಞೆಗೆ ಒಳಗಾದ ಮಹಿಳೆಯ ಮಾನಸಿಕ ಹಾಗೂ ಸಾಮಾಜಿಕ ಸ್ಥಿರತೆಯನ್ನು ಕಂಡುಕೊಳ್ಳುವ ಕೇಂದ್ರವಾಗಿ ಬಿಂಬಿತವಾಗಿದ್ದು,ಇಂತಹ ಕೇಂದ್ರಗಳಲ್ಲಿ ಸೇವೆಯನ್ನು ಸಲ್ಲಿಸುವವರನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಗುರುತಿಸಬೇಕೆಂದು ಹೇಳಿದರು .
ಸಮಗ್ರ ತುಳುನಾಡಿನ ಜನಪದ ಪರಂಪರೆಯು ಭಾರತದ ಸಂಸ್ಕ್ರತಿಗೆ ಅಭೂತಪೂರ್ವವಾದ ಕೊಡುಗೆಯನ್ನು ನೀಡಿದ ಕಾರಣದಿಂದ ವಿದೇಶಿ ಸಂಶೋಧಕರು ತುಳುನಾಡಿನಾದ್ಯಂತ ಸಂಚರಿಸಿ ಭವ್ಯ ಪರಂಪರೆಯನ್ನು ಜಗತ್ತಿನಾದ್ಯಂತ ಪಸರಿಸುವಂತಾಯಿತು ಎಂದು ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯ ಹಿರಿಮೆಯನ್ನು ಕೊಂಡಾಡಿದರು.
ಲೋಕು ಪೂಜಾರಿ ಮಾತನ್ನಾಡಿ ಬೈದೇರುಗಳ ಸತ್ಯ ಧರ್ಮದ ದಯೆಯಿಂದ ಯುವವಾಹಿನಿ ಸದೃಢವಾಗಿ ಸಾಗಲಿ ಎಂದು ಆಶಿಸಿದರು.
ಯುವವಾಹಿನಿ ಮಾಜಿ ಅಧ್ಯಕ್ಷರೂ ,ಕಾರ್ಯಕ್ರಮದ ಸಂಚಾಲಕರಾದ ಭಾಸ್ಕರ ಸುವರ್ಣ ಕನ್ನರ್ಪಾಡಿ ಸ್ವಾಗತಿಸಿದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ,ಮಂಗಳೂರು ವಿ ವಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಅಧ್ಯಕ್ಷರೂ ಆಗಿರುವ ಶ್ರೀ ಮುದ್ದು ಮೂಡುಬೆಳ್ಳೆ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಪ್ರಶಸ್ತಿ ನೀಡಲು ಅರ್ಹ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದರು.
ಶ್ರೀ ಬನ್ನಂಜೆ ಬಾಬು ಅಮೀನ್ ಮಾತನಾಡಿ ಯುವವಾಹಿನಿ ನೇತೃತ್ವದಲ್ಲಿ ನನ್ನ ಹೆಸರಲ್ಲಿ ನೀಡುವ ಪ್ರಶಸ್ತಿ ತುಂಬಾ ಸಂತೋಷ ಹಾಗೂ ಹೆಮ್ಮೆಯೆನಿಸುತ್ತಿದೆ.ನನಗೆ ಇದಕ್ಕಿಂತ ಬೇರೆ ಪ್ರಶಸ್ತಿಯ ಅಗತ್ಯ ಇಲ್ಲ ಎಂದರು.ಈ ಸಂದರ್ಭದಲ್ಲಿ ತಲೆಗೊಂದು ಸೂರು ಕಾರ್ಯಕ್ರಮದ ಮಾಹಿತಿ ಹಾಗೂ ಮನವಿಯ ವಿಡಿಯೋವನ್ನು ಮಾಜಿ ಅಧ್ಯಕ್ಷರಾದ ರಘುನಾಥ ಮಾಬಿಯಾನ್ ಬಿಡುಗಡೆ ಮಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಜಗದೀಶ್ ಕುಮಾರ್‌ರವರು ಎಲ್ಲರ ಸಹಕಾರ,ಪ್ರೋತ್ಸಾಹದಿಂದ ಇಂತಹ ಕಾರ್ಯಕ್ರಮಗಳು ಜರಗುತ್ತಿವೆ ಎಂದರು.
ಮಹಿಳಾ ಸಂಚಾಲಕಿ ಕುಮಾರಿ ನವೀಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಮತಿ ಅಮಿತಾಂಜಲಿ ಕಿರಣ್ ಹಾಗೂ ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ ಪ್ರಶಸ್ತಿ ಪುರಸ್ಕ್ರತರನ್ನು ಪರಿಚಯಿಸಿದರು.ಈ ಸಂದರ್ಭದಲ್ಲಿ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.ಉರಗ ತಜ್ಞ ಗುರುರಾಜ್ ಸನಿಲ್ ರವರು ಯುವವಾಹಿನಿಯ ಗ್ರಂಥಾಲಯ ಜ್ಞಾನವಾಹಿನಿ ಗೆ ತಮ್ಮ ಅಮೂಲ್ಯ ಪುಸ್ತಕಗಳನ್ನು ನೀಡಿದರು. ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಮತ್ತು ಭಾಗವಹಿಸಿದವರಿಗೆ ಕಾರ್ಯದರ್ಶಿ ಮಾಲತಿ ಅಮೀನ್ ಧನ್ಯವಾದಗಳನ್ನು ಸಲ್ಲಿಸಿದರು.
You must be logged in to post a comment Login