ಹಾಸನ, ಮಾರ್ಚ್ 14: ಸಾಮಾನ್ಯವಾಗಿ ಸಾವಿರಾರು ಕೋಟಿ ರೂಪಾಯಿ ಸಾಲದ ಸುದ್ದಿಗಳು ಕೇಳಿಬರುತ್ತವೆ. ಆದರೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದ ಘಟನೆ ಮಾತ್ರ ವಿಭಿನ್ನವಾಗಿದೆ. ಇಲ್ಲಿ ರೈತೊಬ್ಬರು ಕೇವಲ 66 ಪೈಸೆಗಾಗಿ ಹೋರಾಟ ನಡೆಸಿದ್ದು, ಕೊನೆಗೂ ಬ್ಯಾಂಕ್ ಆ ಮೊತ್ತವನ್ನು ಅವರ ಖಾತೆಗೆ ಜಮೆ ಮಾಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದೆ.

ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ ಅವರು ಕಳೆದ ವರ್ಷ ಕೆನರಾ ಬ್ಯಾಂಕ್ನಿಂದ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ನಂತರ ಅವರು ಸಾಲವನ್ನು ಬಡ್ಡಿಯೊಂದಿಗೆ ಸಂಪೂರ್ಣವಾಗಿ ಪಾವತಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ಬ್ಯಾಂಕ್ ಕಡೆಯಿಂದ ಕರೆ ಬಂದು, ಇನ್ನೂ 9 ರೂಪಾಯಿ 34 ಪೈಸೆ ಬಾಕಿ ಉಳಿದಿದೆ ಎಂದು ತಿಳಿಸಲಾಯಿತು. ಈ ವಿಚಾರ ಕೇಳಿ ಆಶ್ಚರ್ಯಗೊಂಡ ಚೊಕ್ಕಣ್ಣಗೌಡ ಅವರು ಫೆಬ್ರವರಿ 26ರಂದು ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಗೆ ತೆರಳಿ 10 ರೂಪಾಯಿ ನೀಡಿ ಬಾಕಿ ಮೊತ್ತವನ್ನು ಪಾವತಿಸಿದರು. ಆದರೆ ಬ್ಯಾಂಕ್ ಸಿಬ್ಬಂದಿ 9 ರೂಪಾಯಿ 34 ಪೈಸೆ ಮಾತ್ರ ದಾಖಲಿಸಿ, ಉಳಿದ 66 ಪೈಸೆ ನೀಡದೆ ರಸೀದಿ ನೀಡಿದರು.
ಇದರಿಂದ ಆಕ್ರೋಶಗೊಂಡ ಚೊಕ್ಕಣ್ಣಗೌಡ, “ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಹೋಗುವವರ ಬಗ್ಗೆ ಬ್ಯಾಂಕುಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸಾಲವನ್ನು ಸತ್ಯಸಂಧವಾಗಿ ತೀರಿಸುವ ರೈತರನ್ನು ಕಾಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಸಾಲ ಪಾವತಿಸುವಂತೆ ನೇರವಾಗಿ ಬ್ಯಾಂಕ್ನಿಂದ ಕರೆ ಮಾಡಲಾಗಿಲ್ಲ. ಕಂಪ್ಯೂಟರೈಸ್ಡ್ ಟೆಲಿಕಾಲ್ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ಕರೆ ಹೋಗಿದೆ ಎಂದು ಸ್ಪಷ್ಟನೆ ನೀಡಿದರು.
ಆದರೆ ಚೊಕ್ಕಣ್ಣಗೌಡ ಅವರು ಉಳಿದ 66 ಪೈಸೆಯನ್ನೂ ನೀಡಬೇಕು ಎಂದು ಪಟ್ಟು ಹಿಡಿದರು. ಈ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಬ್ಯಾಂಕ್ ಮೇಲಾಧಿಕಾರಿಗಳ ಗಮನಕ್ಕೆ ಬಂತು. ಕೊನೆಗೆ ಬ್ಯಾಂಕ್ ಅಧಿಕಾರಿಗಳು ರೈತನ ಖಾತೆಗೆ 66 ಪೈಸೆ ಜಮೆ ಮಾಡಿ ಮೆಸೇಜ್ ಮೂಲಕ ಮಾಹಿತಿ ನೀಡಿದರು. ಹೀಗೆ ಸಣ್ಣದಾಗಿ ಕಂಡರೂ, 66 ಪೈಸೆಗಾಗಿ ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗೆ ಕಾರಣವಾಗಿದ್ದು, ಬ್ಯಾಂಕ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.