ಬೆಳ್ತಂಗಡಿ ಸೆಪ್ಟೆಂಬರ್ 16: ಧರ್ಮಸ್ಥಳ ಪ್ರಕರಣದಲ್ಲಿ ಇತ್ತೀಚೆಗೆ ಸ್ಥಳೀಯ ನಿವಾಸಿಗಳಿಬ್ಬರು ಗುರುತಿಸಿರುವ ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವಂತೆ ಹಾಗೂ ಶವಗಳ ಉತ್ಖನನ ನಡೆಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಎಸ್ಐಟಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಧರ್ಮಸ್ಥಳ ಗ್ರಾಮದ ಪುರಂದರ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಧರ್ಮಸ್ಥಳ ಸಾಮೂಹಿಕ ಅಂತ್ಯ ಸಂಸ್ಕಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರಿಗೆ ಸೂಚಿಸಿ, ವಿಚಾರಣೆಯನ್ನು ಗುರುವಾರಕ್ಕೆ (ಸೆಪ್ಟೆಂಬರ್ 18ಕ್ಕೆ) ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ದೀಪಕ್ ಖೋಸ್ಲಾ ವಾದ ಮಂಡಿಸಿ, ಅರ್ಜಿದಾರರು ತಾವು ಗುರುತಿಸಿರುವ ವಿವಿಧ ಸ್ಥಳಗಳಲ್ಲಿ ಶೀಘ್ರ ಪರಿಶೀಲನೆ ಹಾಗೂ ಉತ್ಕನನ ನಡೆಸುವಂತೆ ಆ.6 ಮತ್ತು 29ರಂದು ಎಸ್‌ಐಟಿಗೆ ಮನವಿ ಸಲ್ಲಿಸಿದ್ದರು. ಅರ್ಜಿದಾರರು ಗುರುತಿಸಿರುವ ಜಾಗಗಳಲ್ಲಿ ಮೃತದೇಹಗಳ ಕೆಲ ಭಾಗಗಳು ಪ್ರಾಣಿಗಳು ಹಾಗೂ ಮನುಷ್ಯರಿಗೆ ಗೋಚರಿಸುವಂತಿದ್ದು, ಶೀಘ್ರ ಸ್ಥಳ ಪರಿಶೀಲನೆ ನಡೆಸುವ ಅಗತ್ಯವಿದೆ. ಒಂದು ವೇಳೆ ಮಾಹಿತಿ ಸುಳ್ಳಾಗಿದ್ದರೆ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಜರಗಿಸಬಹುದು ಎಂದೂ ಮನವಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು.
ಈ ಅರ್ಜಿಯು ಎಸ್ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸಲು ಅಲ್ಲ. ಬದಲಾಗಿ, ತನಿಖಾ ತಂಡಕ್ಕೆ ಸಹಾಯ ಮಾಡುವುದು ಮತ್ತು ಅವರನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ಹೀಗೆ ಕೋರ್ಟ್ ಮೊರೆ ಹೋಗಲು ಒಂದು ಪ್ರಮುಖ ಕಾರಣವಿದೆ. ಸೆಪ್ಟೆಂಬರ್ 6 ರಂದು, ಎಸ್ಐಟಿ ತಂಡವೇ ಧರ್ಮಸ್ಥಳದ ಬಂಗ್ಲೆ ಗುಡ್ಡೆಯಲ್ಲಿ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆ ಹಚ್ಚಿತ್ತು.
ರಹಸ್ಯ ಸಮಾಧಿಗಳು ಇರುವುದು ಕೇವಲ ಆರೋಪವಲ್ಲ, ಅದು ನಿಜ ಎಂದು ಇದರಿಂದ ಸಾಬೀತಾಗಿದೆ. ಅದಕ್ಕಾಗಿಯೇ ಈಗ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.



