Connect with us

DAKSHINA KANNADA

ಹಿಂದೂ ಸಂಘಟನೆಗಳಿಗೆ ಜಾಹೀರಾತು ಕೊಟ್ಟರೆ ಜೋಕೆ, ಬಹಿಷ್ಕಾರದ ಶಿಕ್ಷೆಯಾದೀತು ಓಕೆ ?

ಹಿಂದೂ ಸಂಘಟನೆಗಳಿಗೆ ಜಾಹೀರಾತು ಕೊಟ್ಟರೆ ಜೋಕೆ, ಬಹಿಷ್ಕಾರದ ಶಿಕ್ಷೆಯಾದೀತು ಓಕೆ ?

ಮಂಗಳೂರು, ನವಂಬರ್ 2: ಹಿಂದೂ ಅಂಗಡಿಗಳು ಹಾಗೂ ಹಿಂದೂ ಶಾಪಿಂಗ್ ಕಾಂಪ್ಲೆಕ್ಸ್ ಹೊಂದಿರುವವರು ಇನ್ನು ಮುಂದೆ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಜಾಹೀರಾತು ನೀಡುವಂತಿಲ್ಲ. ಒಂದು ವೇಳೆ ನೀಡಿದ್ದೇ ಆದಲ್ಲಿ ಆ ಅಂಗಡಿಗಳಿಗೆ ಬಹಿಷ್ಕಾರದ ಬರೆ ಬೀಳಲಿದೆ. ಹೌದು ಇಂಥಹುದೊಂದು ಹೊಸ ಆಂದೋಲನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪ್ರಖ್ಯಾತ ಸಿದ್ಧ ಉಡುಪುಗಳ ಮಳಿಗೆ ರಾಧಾಸ್ ಗೆ ಈ ಬಹಿಷ್ಕಾರದ ಬಿಸಿ ತಟ್ಟಿದೆ. ರಾಧಾಸ್ ಮಳಿಗೆಯ ಮಾಲಕರು ತಮ್ಮ ಮಳಿಗೆಗೆ ಜಾಹೀರಾತು ಕೇಳಲು ಬಂದಿದ್ದ ಸನಾತನ ಸಂಸ್ಥೆಯವರಿಗೆ ಜಾಹೀರಾತು ನೀಡಿದ್ದರು. ಸನಾತನ ಸಂಸ್ಥೆಯ ಪಂಚಾಗ ಬನವರಿ 2018 ನೇ ಮುಖಪುಟದಲ್ಲಿ ಈ ಜಾಹೀರಾತು ಇತ್ತೀಚೆಗೆ ಪ್ರಕರಣಗೊಂಡಿದೆ. ಇದನ್ನೇ ದೊಡ್ಡ ವಿಚಾರವನ್ನಾಗಿ ಪರಿಗಣಿಸಿರುವ ಕೆಲವು ಕೋಮುವಾದಿ ಮುಖವುಳ್ಳ ಜ್ಯಾತ್ಯಾತೀತರು ಎಂದು ಭಾಷಣ ಬಿಗಿಯುವ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸೈಲೆಂಟ್ ಆಗಿ ಕೋಮುಬಣ್ಣ ಹಚ್ಚಿದ್ದಾರೆ. ರಾಧಾಸ್ ನವರು ಆರ್.ಎಸ್.ಎಸ್ ನವರಿಗೆ ಜಾಹೀರಾತು ನೀಡುತ್ತಿದ್ದಾರೆ, ಹಿಂದೂ ರಾಷ್ಟ್ರವೇ ತಮ್ಮ ಗುರಿಯೆಂದು ಈ ಪಂಚಾಗದಲ್ಲಿ ಬರೆಯಲಾಗಿದೆ. ಈ ಕಾರಣಕ್ಕಾಗಿ ಹೆಚ್ಚಾಗಿ ಮುಸ್ಲಿಂ ಧರ್ಮೀಯರೇ ಸಂದರ್ಶಿಸುವ ಈ ಮಳಿಗೆಗೆ ಇನ್ನು ಮುಂದೆ ಮುಸಲ್ಮಾನರು ಯಾವುದೇ ಕಾರಣಕ್ಕೆ ಹೋಗಬಾರದು. ರಾಧಾಸ್ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನ ನಡೆಸುತ್ತಿರುವ ಆರ್.ಎಸ್.ಎಸ್ ಗೆ ಬೆಂಬಲ ನೀಡುತ್ತಿದೆ, ಈ ಮಂದಿ ಜ್ಯಾತ್ಯಾತೀತ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಂಘಪರಿವಾರದೊಂದಿಗೆ ಕೈ ಜೋಡಿಸಿದ್ದಾರೆ ಎಂದೆಲ್ಲಾ ಸಿಕ್ಕ ಸಿಕ್ಕ ವಾಟ್ಸ್ ಅಪ್ ಹಾಗೂ ಫೇಸ್ಬುಕ್ ಪೇಜ್ ಗಳಲ್ಲಿ ಶೇರ್ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ ಮುಸ್ಲಿಂ ಬಾಂಧವರು ಈ ಮಳಿಗೆಗೆ ಯಾವುದೇ ಕಾರಣಕ್ಕೂ ಖರೀದಿಗಾಗಿ ಹೋಗಬಾರದು ಎನ್ನುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಈ ಮೆಸೇಜ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸ್ವತಹ ರಾಧಾಸ್ ಮಳಿಗೆಯ ಮಾಲಕರಿಗೂ ಇದು ತಲುಪಿದೆ. ಈ ಸಂಬಂಧ ಮಳಿಗೆ ಮಾಲಕರು ಈಗಾಗಲೇ ಮಂಗಳೂರಿನ ಸೈಬರ್ ಸೆಲ್ ಗೆ ದೂರನ್ನೂ ನೀಡಿದ್ದಾರೆ. ಕ್ಷುಲ್ಲಕ ವಿಚಾರವನ್ನಿಟ್ಟುಕೊಂಡು ಬಹಿಷ್ಕಾರದಂತಹ ಮಾತುಗಳನ್ನಾಡುವ ವ್ಯಕ್ತಿಗಳನ್ನೇ ಸಮಾಜದಿಂದ ಬಹಿಷ್ಕರಿಸಬೇಕು ಎನ್ನುವ ಮಾತುಗಳೂ ಇದೀಗ ಕೇಳಿ ಬರುತ್ತಿದೆ.