ಬೆಳ್ತಂಗಡಿ ಫೆಬ್ರವರಿ 19: ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನ ಆಕಾರದ ವಸ್ತುವೊಂದು ಸ್ಪೋಟಗೊಂಡ ಘಟನೆ ನಡೆದಿದ್ದು, ಬಾಲಕನೊಬ್ಬ ಸಣ್ಣಪುಟ್ಚ ಗಾಯಗಳಿಂದ ಪಾರಾಗಿದ್ದಾನೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದ ಬೈಪಾಡಿಯಲ್ಲಿ ಫೆಬ್ರವರಿ 18 ರಂದು ಬುಧವಾರ ಸಂಜೆ ಈ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತನೇ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಬಾಲಕ. ಅಂಗಳದಲ್ಲಿ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂಥ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದಾರೆ
ಸ್ಫೋಟದ ತೀವ್ರತೆಗೆ ಅಭೀಶ್ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡು ಪ್ರಾಣಿ ಬೇಟೆಗೆ ಬಳಸಿರುವ ಸ್ಫೋಟಕ ಎಂಬ ಶಂಕೆಯನ್ನು ಮನೆಯವರು ವ್ಯಕ್ತಪಡಿಸಿದ್ದಾರೆ, ತೋಟದಲ್ಲಿ ಇದ್ದ ಸ್ಫೋಟಕವನ್ನು ನಾಯಿ ಮನೆಯ ಅಂಗಳಕ್ಕೆ ತಂದಿರಬಹುದು ಅದು ಚೆಂಡಿನ ಆಕಾರದಲ್ಲಿ ಇದ್ದು ಮಕ್ಕಳು ಕ್ರಿಕೆಟ್ ಆಟಕ್ಕೆ ಬಳಸಿದ್ದು ಆಟವಾಡುವ ವೇಳೆ ಸ್ಫೋಟವಾಗಿದೆ.