ಮಂಗಳೂರು ಮಾರ್ಚ್ 21: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಸಾಸ್ತಾವು ಎಂಬಲ್ಲಿ ಫಾರ್ಚೂನರ್ ಕಾರಿನಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ನಿಸಾರ್ ಅಲಿಯಾಸ್ ನಿಸಾರುದ್ದೀನ್ ಅಲಿಯಾಸ್ ಪಾರಿವಾಳ ನಿಸಾರ್ (28) ಮತ್ತು ಮೊಹಮ್ಮದ್ ಜಮಾಲುದ್ದೀನ್ ಅಲಿಯಾಸ್ ಜಮಾಲ್ (24) ಎಂದು ಗುರುತಿಸಲಾಗಿದೆ. ಮಾರ್ಚ್ 19ರಂದು ಇವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಮಾರ್ಚ್ 18ರಂದು ಬೆಳಗಿನ ಜಾವ 4:45ಕ್ಕೆ ಸಾಸ್ತಾವು ಎಂಬಲ್ಲಿ ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ (DL 10 CE 6227) ನಾಲ್ಕು ದನಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದಾಗ ಬಜಪೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳು ಕಾರು ಮತ್ತು ದನಗಳನ್ನು ಬಿಟ್ಟು ಪರಾರಿಯಾಗಿದ್ದರು. ಸ್ಥಳದಲ್ಲಿ 4 ದನಗಳು, ಕೃತ್ಯಕ್ಕೆ ಬಳಸಿದ ಫಾರ್ಚೂನರ್ ಕಾರು, ತಲವಾರ್ ಮತ್ತು ಕಬ್ಬಿಣದ ರಾಡ್ ಸೇರಿದಂತೆ ಒಟ್ಟು ₹8.42 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಎಸಿಪಿ ಶ್ರೀಕಾಂತ್ ಮತ್ತು ಇನ್ಸ್ಪೆಕ್ಟರ್ ಬಾಲಕೃಷ್ಣ ಮಾರ್ಗದರ್ಶನದಲ್ಲಿ ಪಿಎಸ್ಐ ಲತಾ ಹಾಗೂ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.