ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಎಡಪದವು ಎಂಬಲ್ಲಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಎಡಪದವು ಎಂಬಲ್ಲಿ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.

ಸೋಮವಾರ ಸಂಜೆ ಈ ಕೃತ್ಯ ನಡೆದಿದ್ದು ಸ್ಥಳಕ್ಕೆ ಬಜ್ಪೆ ಪೊಲೀಸರ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ತಲವಾರು ದಾಳಿಗೆ ಒಳಗಾದ ಯುವಕನೆಂದು ತಿಳಿದು ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಬೈಕಿನಲ್ಲಿ ನಾಲ್ವರು ಕುಳಿತುಕೊಂಡು, ಕೈಯಲ್ಲಿ ಚೂರಿ ಹಿಡಿದುಕೊಂಡು ಸಾಗುತ್ತಿದ್ದುದ್ದನ್ನು ಅಖಿಲೇಶ್ ನೋಡಿದ್ದರು. ಈ ಕುರಿತು ವಿಡಿಯೊ ಚಿತ್ರೀಕರಿಸಲು ಅವರನ್ನು ಹಿಂಬಾಲಿಸಿದ್ದರು. ಬೈಕಿನಲ್ಲಿ ಸಾಗುತ್ತಿದ್ದ ಕಿಡಿಗೇಡಿಗಳು ಅಖಿಲೇಶ್ ಅವರತ್ತ ಚೂರಿ ಬೀಸಿದ್ದು, ಅವರ ಕೈಗಳಿಗೆ ಗಾಯಗಳಾಗಿವೆ. ಆ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ .

ಅಖಿಲೇಶ್ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಕೈಗೆ ಬಲವಾದ ಗಾಯವಾಗಿದ್ದು ಪ್ರಾಣಾಪಾಯ ವಾಗಿಲ್ಲ ಎನ್ನಲಾಗಿದೆ. ಅಖಿಲೇಶ್ ಸ್ಥಳಿಯವಾಗಿ ಕೇಟರಿಂಗ್ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಾಲ್ವರು ಆರೋಪಿಗಳ ಗುರುತು ಪತ್ತೆಯಾಗಿದೆ. ಆರೋಪಿಗಳು ಈ ಘಟನೆಗೂ ಮುನ್ನ ಬಾರ್ ಒಂದರಿಂದ ಹೊರಗೆ ಬರುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅವರು ಪಾನಮತ್ತರಾಗಿದ್ದರೆ ಅಥವಾ ಬೇರಾವುದೇ ಅಮಲು ಪದಾರ್ಥ ಸೇವಿಸಿ, ಅದರ ಪ್ರಭಾವಕ್ಕೆ ಒಳಗಾಗಿದ್ದರೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಈ ಕೃತ್ಯದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.



