ಕಾರವಾರ, ಮಾರ್ಚ್ 12: ಉತ್ತರ ಕನ್ನಡ ಜಿಲ್ಲೆಯ ಕದ್ರಾ ಪ್ರದೇಶದಲ್ಲಿ ನಡೆದ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಮುಖಂಡೆಯ ಪುತ್ರ ಚಿರಾಗ್ ಕೊಠಾರಕರ್ಗೆ ಧಾರವಾಡ ವಿಭಾಗೀಯ ಹೈಕೋರ್ಟ್ ಪೀಠವು ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಚಿರಾಗ್ ಕೊಠಾರಕರ ವಿರುದ್ಧ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣದ ಹಿನ್ನೆಲೆಯಾಗಿ, ಕದ್ರಾದ ಕೆಪಿಸಿ ಕಾಲೊನಿಯಲ್ಲಿ ವಾಸವಾಗಿದ್ದ ರಿಶೇಲ್ ಡಿಸೋಜಾ ಎಂಬ ಯುವತಿ ಜನವರಿ 10ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ರಿಶೇಲ್ ಮತ್ತು ಚಿರಾಗ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದರೂ, ಚಿರಾಗ್ ತನ್ನ ಪುತ್ರಿಗೆ ಕಿರುಕುಳ ನೀಡಿದ್ದು ಹಾಗೂ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ಬಳಿಕ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ರಿಶೇಲ್ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಸಂವೇದನಾಶೀಲತೆಯನ್ನು ಗಮನದಲ್ಲಿಟ್ಟುಕೊಂಡು ಮೃತದೇಹಕ್ಕೆ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ತನಿಖೆಯ ವೇಳೆ ಪರಾರಿಯಾಗಿದ್ದ ಚಿರಾಗ್ ಕೊಠಾರಕರ್ರನ್ನು ಕದ್ರಾ ಪೊಲೀಸರು ಜನವರಿ 29ರಂದು ಚೆನ್ನೈನಲ್ಲಿ ಪತ್ತೆಹಚ್ಚಿ ಬಂಧಿಸಿದ್ದರು. ಬಂಧನದ ಬಳಿಕ ಕಳೆದ ಒಂದೂವರೆ ತಿಂಗಳಿನಿಂದ ಜೈಲಿನಲ್ಲಿ ಇದ್ದ ಚಿರಾಗ್ ಕೊಠಾರಕರ್ರು ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ವಿಭಾಗೀಯ ಹೈಕೋರ್ಟ್ ಪೀಠವು ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಪ್ರಕರಣವು ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕದ್ರಾ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.