ಆಲಪ್ಪುಳ ಜನವರಿ 08: ಆನೆಯ ಕಾಲಿನ ಕೆಳಗಿನಿಂದ ಮಗುವನ್ನು ತೆಗೆಯುವ ಒಂದು ಆಚರಣೆಯ ವೇಳೆ 6 ತಿಂಗಳ ಮಗುವೊಂದು ಆನೆಯ ಮಾವುತನ ಕೈಯಿಂದ ಜಾರಿ ಆನೆಯ ಕಾಲಿನ ಬಳಿ ಬಿದ್ದ ಘಟನೆ ಕೇರಳದ ಅಲ್ಲಪ್ಪುಳದ ಹರಿಪಾದ ಎಂಬಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಆನೆಯ ಇಬ್ಬರು ಮಾವುತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಆನೆ ಮಾವುತ ಜಿತಿನ್ ರಾಜನ್ ಮತ್ತು ಅವರ ಸಹಾಯಕ ಮಗುವಿನ ತಂದೆ ಅಭಿಲಾಷ್ ಎಂದು ಗುರುತಿಸಲಾಗಿದೆ. ಅಭಿಲಾಷ್ ತನ್ನ ಆರು ತಿಂಗಳ ಮಗುವನ್ನು ಅನ್ನಪ್ರಾಶನಕ್ಕೆ ಹರಿಪಾದ್ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕರೆತಂದಿದ್ದರು. ಅಲ್ಲಿ ಅನ್ನಪ್ರಾಶನದ ನಂತರ ಮಗುವನ್ನು ದೇವಸ್ಥಾನದಲ್ಲಿರುವ ಆನೆ ಹರಿಪಾದ್ ಸ್ಕಂದನ್ ಹತ್ತಿರ ಕರೆದುಕೊಂಡು ಬಂದಿದ್ದಾರೆ.

ಅಲ್ಲಿ ಮಗುವಿಗೆ ಭಯವನ್ನು ಹೋಗಲಾಡಿಸಲು ಮಾಡುವ ಆಚರಣೆಯನ್ನು ಮಾಡಿದ್ದಾರೆ, ಅದರಂತೆ ಮಗುವನ್ನು ಆನೆಯ ಸೊಂಡಿಲಿನ ಕೆಳಗಿನಿಂದ ಮತ್ತೊಂದು ಬದಿಗೆ ಕಡೆ ತೆಗೆದುಕೊಂಡು ಹೋಗಲಾಗುತ್ತದೆ. ಅದೇ ರೀತಿ ಆನೆಯ ಮತ್ತೊಬ್ಬ ಮಾವುತ ಜಿತಿನ್ ಮಗುವನ್ನು ಆನೆಯ ಸೊಂಡಿಲಿನಿಂದ ಕೆಳಗೆ ತೆಗೆದು ಮಗುವಿನ ತಂದೆ ಅಭಿಲಾಶ್ ಕೈಗೆ ಕೊಟ್ಟಿದ್ದಾನೆ. ಈ ವೇಳೆ ಅಭಿಲಾಶ್ ಕೈಯಿಂದ ಮಗು ಜಾರಿ ಸೀದಾ ಆನೆಯ ಕಾಲಿನ ಬಳಿಗೆ ಬಿದ್ದಿದೆ.
ಅದೃಷ್ಟವಶಾತ್ ಆನೆ ಸ್ಕಂದನ್ ಈ ವೇಳೆ ಸುಮ್ಮನೆ ನಿಂತಿದ್ದು, ಮಗುವಿನ ಜೀವ ಉಳಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಮಾವುತರ ಮಾಡಿದ ಆನೆ ಸ್ಕಂದನ್ ಈ ಹಿಂದೆ ಮದವೇರಿ ಒಬ್ಬ ಮಾವುತನನ್ನು ತುಳಿದು ಸಾಯಿಸಿತ್ತು. ಆ ಘಟನೆಯ ಬಳಿಕ ಆನೆಯನ್ನು ಸರಪಳಿಗಳಲ್ಲಿ ಬಂಧಿಸಲಾಗಿದ್ದು, ಪಶುವೈದ್ಯಕೀಯ ಅಧಿಕಾರಿಗಳು ಇನ್ನೂ ಫಿಟ್‌ನೆಸ್ ಪ್ರಮಾಣಪತ್ರವನ್ನು ನೀಡಿಲ್ಲ. ಅಂತಹ ಆನೆಯ ಎದುರೇ ಇಬ್ಬರು ಮೂಡನಂಬಿಕೆ ಆಚರಣೆ ಮಾಡಲು ಹೋಗಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಗುವಿನ ತಂದೆ ಅಭಿಲಾಶ್ ಮತ್ತು ಜಿತಿನ್ ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಇಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.



