LATEST NEWS
ಪೊಲಿಯೋ ಡ್ರಾಪ್ಸ್ ಪಡೆದ ಕೆಲವೇ ಕ್ಷಣಗಳಲ್ಲಿ ಕಂದಮ್ಮನ ಸಾವು!
ಹೈದರಾಬಾದ್, ಫೆಬ್ರವರಿ 01: ಪೊಲಿಯೋ ಡ್ರಾಪ್ಸ್ ಪಡೆದ ಕೆಲವೇ ಕ್ಷಣಗಳಲ್ಲಿ ಎರಡು ವರ್ಷದ ಮಗು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಜ್ಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಸಾವಿಗೆ ಪೊಲಿಯೋ ಹನಿಗಳೇ ಕಾರಣ ಎಂದು ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ರಮೇಶ್ ದಂಪತಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು. ದಂಪತಿಗೆ ಎರಡು ತಿಂಗಳು 16 ದಿನದ ಮಗುವಿತ್ತು. ಮಗುವಿಗೆ ಭಾನುವಾರ ಬೆಳಗ್ಗೆ ಪೊಲಿಯೋ ಡ್ರಾಪ್ಸ್ ಹಾಕಿಸಲಾಗಿದೆ. ಡ್ರಾಪ್ಸ್ ಪಡೆದ ಕೆಲವೇ ನಿಮಿಷಗಳಲ್ಲಿ ಮಗು ಅಸ್ವಸ್ಥವಾಗಿದೆ. ಕೂಡಲೇ ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲವೆನ್ನಲಾಗಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಗಿದೆ. 11.55ರ ಸಮಯಕ್ಕೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗು ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ. ಪೊಲಿಯೋ ಡ್ರಾಪ್ಸ್ನಿಂದಲೇ ಮಗು ಸಾವನ್ನಪ್ಪಿರುವುದಾಗಿ ಕುಟುಂಬ ಪೊಲೀಸ್ ದೂರು ದಾಖಲಿಸಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಗುವಿನ ಸಾವಿಗೆ ಪೊಲಿಯೋ ಡ್ರಾಪ್ಸ್ ಕಾರಣವಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ವೈದ್ಯಕೀಯ ಅಧೀಕ್ಷಕ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದ್ದಾರೆ. ಒಂದು ಬಾಕ್ಸ್ನಲ್ಲಿ 40 ಬಾಟೆಲ್ಗಳಲ್ಲಿ ಪೊಲಿಯೋ ಡ್ರಾಪ್ಸ್ ಇರುತ್ತದೆ. ಈ ಮಗು ಪೊಲಿಯೋ ಡ್ರಾಪ್ಸ್ ಪಡೆದ ನಂತರ 17 ಮಕ್ಕಳಿಗೆ ಅದೇ ಬಾಕ್ಸ್ನಲ್ಲಿದ್ದ ಡ್ರಾಪ್ಸ್ ಹಾಕಲಾಗಿದೆ. ಬೇರೆ ಯಾರಿಗು ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ನಿಜಾಂಶ ತಿಳಿದುಬರಲಿದೆ.