ಬಾಬರಿ ಮಸೀದಿ ದ್ವಂಸ ಸಂದರ್ಭದಲ್ಲಿ ನನ್ನ ಬಂಧನಕ್ಕೆ ತುಂಬಾ ಪ್ರಯತ್ನಗಳು ನಡೆದವು – ಪೇಜಾವರ ಶ್ರೀ

ಉಡುಪಿ ನವೆಂಬರ್ 23: ಬಾಬರಿ ಮಸೀದಿಯನ್ನು ಧ್ವಂಸಕ್ಕೆ ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅನುಕೂಲ ಮಾಡಿಕೊಟ್ಟಿದ್ದರು. ಇದಿರಂದಾಗಿ ಬಾಬರಿ ಮಸೀದಿ ಧ್ವಂಸ ನಿರಾತಂಕವಾಗಿ ನಡೆಯಿತು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರಾಮಮಂದಿರದ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿರುವ ಜನಾಗ್ರಹ ಸಭೆಗೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಬರಿ ಮಸೀದಿ ಧ್ವಂಸ ಮಾಡುತ್ತಿರುವಾಗ ಕ್ರಮ ಕೈಗೊಳ್ಳುತ್ತಿದ್ದರೆ ನೂರಾರು ಮಂದಿ ಸಾಯುತ್ತಿದ್ದರು. ಅದಕ್ಕಾಗಿ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನಮ್ಮಲ್ಲಿ ಹೇಳಿದ್ದರು ಎಂದರು.

ಬಾಬರಿ ಮಸೀದಿಯನ್ನು ಬಲಾತ್ಕಾರವಾಗಿ ಕೆಡವಿ ಹಾಕುವುದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ಸರಕಾರಕ್ಕೆ ಲಿಖಿತವಾಗಿ ಹೇಳಿರುವುದರಿಂದ ಮಸೀದಿ ಧ್ವಂಸ ಗೊಳಿಸುವ ಯೋಜನೆ ಮಾಡಿರಲಿಲ್ಲ. ಆದರೆ ಕರಸೇವಕರು ನಿರ್ಣಯ ಮೀರಿ ಆಕ್ರಮಣ ಮಾಡಿ ಧ್ವಂಸಗೊಳಿಸಿದರು ಎಂದು ಹೇಳಿದರು.

ಬಾಬರಿ ಮಸೀದಿ ಧ್ವಂಸದ ವಿಚಾರದಲ್ಲಿ ಮುಸ್ಲಿಮರು ಅಸಮಾಧಾನ ಪಡಲು ಅಲ್ಲಿ ಕಾರಣವೇ ಇರಲಿಲ್ಲ. ಯಾಕೆಂದರೆ ಆ ಸ್ಥಳದಲ್ಲಿ ಮಂದಿರ ಇದ್ದಿರುವುದಕ್ಕೆ ಸ್ಪಷ್ಟ ಆಧಾರಗಳಿದ್ದವು. ಈ ಬಗ್ಗೆ ಹೇಳಿಕೆ ಕೊಟ್ಟ ನನ್ನನ್ನು ಬಂಧಿಸಲು ತುಂಬಾ ಪ್ರಯತ್ನಗಳು ನಡೆದವು. ಆಗ ನಾನು ಕೂಡ ಬಂಧನಕ್ಕೆ ಸಿದ್ಧನಾಗಿದ್ದೆ. ಆದರೆ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ದಿ ನನ್ನ ಬಂಧಿಸುವ ಸಾಹಸ ಮಾಡಿರಲಿಲ್ಲ ಎಂದು ಪೇಜಾವರ ಶ್ರೀಗಳು ತಿಳಿಸಿದರು.

2 Shares

Facebook Comments

comments