Connect with us

LATEST NEWS

ನಾಳೆ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು..!

ಹೊಸದಿಲ್ಲಿ: ಸುದೀರ್ಘ ವಿಚಾರಣೆ ಕಂಡಿರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬುಧವಾರ (ಸೆ.30) ಪ್ರಕಟವಾಗಲಿದೆ. ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿರುವ ತೀರ್ಪಿನ ವೇಳೆ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರುಳಿ ಮನೋಹರ್‌ ಜೋಷಿ ಹಾಗೂ ಉಮಾ ಭಾರತಿ ಗೈರಾಗುವ ಸಾಧ್ಯತೆ ಇದೆ.

ನ್ಯಾಯಮೂರ್ತಿ ಎಸ್‌.ಕೆ.ಯಾದವ್‌ ಪ್ರಕರಣದ ಎಲ್ಲಾ 32 ಆರೋಪಿಗಳಿಗೂ ತೀರ್ಪು ನೀಡುವ ವೇಳೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಮಾಜಿ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಬಿಜೆಪಿ ನಾಯಕರಾದ ಮುರುಳಿ ಮನೋಹರ್‌ ಜೋಷಿ, ಕಲ್ಯಾಣ್‌ ಸಿಂಗ್‌, ಉಮಾ ಭಾರತಿ, ವಿನಯ್‌ ಕಟಿಯಾರ್‌ ಮತ್ತು ಸಾಧ್ವಿ ರಿತಾಂಬರಾ ಪ್ರಮುಖ ಆರೋಪಿಗಳಾಗಿದ್ದಾರೆ.

ವರದಿಗಳ ಪ್ರಕಾರ ಎಲ್‌.ಕೆ.ಅಡ್ವಾಣಿ, ಉಮಾ ಭಾರತಿ, ಕಲ್ಯಾಣ್‌ ಸಿಂ, ಮುರುಳಿ ಮನೋಹರ್‌ ಜೋಷಿ, ಸತೀಶ್‌ ಪ್ರಧಾನ್‌, ನೃತ್ಯಗೋಪಾಲ್‌ ದಾಸ್‌ ಸೇರಿ ಹಿರಿಯ ನಾಯಕರು ಸೆಪ್ಟೆಂಬರ್‌ 30ರ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಂಗ ಪ್ರಕ್ರಿಯೆಯಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.

ಚಂಪತ್‌ ರಾಯ್‌, ಬ್ರಿಜ್‌ಭೂಷಣ್‌ ಸಿಂಗ್‌, ಪವನ್‌ ಪಾಂಡೆ ಲಲ್ಲು ಸಿಂಗ್‌, ಸಾಕ್ಷಿ ಮಹಾರಾಜ್‌, ಸಾಧ್ವಿ ರಿತಾಂಬಾರ, ಆಚಾರ್ಯ ಧರ್ಮೆಂದ್ರ ದೇವ್‌, ರಾಮಚಂದ್ರ ಖತ್ರಿ, ಸುಧೀರ್‌ ಕಕ್ಕರ್‌, ಒಪಿ ಪಾಂಡೆ, ಜೈ ಭಗವಾನ್‌ ಗೋಯಲ್‌, ಅಮರ್‌ನಾಥ್‌ ಗೋಯಲ್‌ ಮತ್ತು ಸಂತೋಷ್‌ ದುಬೆ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಬುಧವಾರ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಅಂತಿಮ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ಮುಕ್ತಾಯಗೊಳಿಸಲಾಗಿದೆ. ನ್ಯಾಯಮೂರ್ತಿ ಎಸ್‌.ಕೆ.ಯಾದವ್‌ ತಮ್ಮ ಅಂತಿಮ ತೀರ್ಪನ್ನು ಬರೆಯುವುದಕ್ಕೂ ಮುಂಚೆ ಆರೋಪಿಗಳು ಕೊರೊನಾ ವೈರಸ್‌ ಪರಿಸ್ಥಿತಿ ಕಾರಣದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ತಮ್ಮ ಹೇಳಿಕೆಗಳನ್ನು ಕೋರ್ಟ್‌ಗೆ ದಾಖಲಿಸಿದ್ದಾರೆ.

1992 ಡಿಸೆಂಬರ್‌ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿದೆ. ಆರಂಭಿಕವಾಗಿ 48 ಜನರನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಆದರೆ, ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿರುವುದರಿಂದ 48 ಜನ ಆರೋಪಿಗಳ ಪೈಕಿ 16 ಜನ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು.