ಆಯುಷ್ಮಾನ್ ಭಾರತ ಫಲಾನುಭವಿಗಳಿಗೆ ರಾಜ್ಯ ಸರಕಾರದಿಂದ ಗುಡ್ ನ್ಯೂಸ್

ಉಡುಪಿ ಸೆಪ್ಟಂಬರ್ 28: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಿವಿಧ ರೋಗಗಳಿಗೆ ಸರ್ಕಾರಿ ಆಸ್ಪತ್ರೆಯ ರೆಫರಲ್ ಪತ್ರ ಪಡೆಯಬೇಕಿದ್ದು, ಇದನ್ನು 1 ಮತ್ತು 2 ಹಂತದ ಕಾಯಿಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು, 3 ಹಂತದಲ್ಲಿರುವ ರೋಗಗಳಿಗೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದು, ಈ ಕುರಿತಂತೆ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಅವರು ಶನಿವಾರ, ಉಡುಪಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಮಾತನಾಡಿದರು. ಪ್ರಸ್ತುತ ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ , 4 ನೇ ಹಂತದ ರೋಗಗಳಿಗೆ ಮಾತ್ರ  ಅನಾರೋಗ್ಯ ಪೀಡಿತರು  ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದ್ದು, ಈ ಸೌಲಭ್ಯವನ್ನು 3 ನೇ ಹಂತದಲ್ಲಿ ಗುರುತಿಸಲಾಗಿರುವ ರೋಗಗಳಿಗೆ  ಸಹ ವಿಸ್ತರಿಸುವ ಕುರಿತಂತೆ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು.

ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವೈದ್ಯರು ಮತ್ತು ಸಿಬ್ಬಂದಿಯ ಜೊತೆಗೆ , ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ಯುನಿಟ್ ಸಹ ಕಾರ್ಯ ನಿರ್ವಹಿಸುವ ಕುರಿತಂತೆ , ಉಡುಪಿ ಶಾಸಕರು ಸಲ್ಲಿಸಿರುವ ಮನವಿಯ ಮೇರೆಗೆ ಸದ್ರಿ ಆಸ್ಪತ್ರೆಯ ಮುಖ್ಯಸ್ಥರು, ಇಲಾಖೆಯ ಕಾರ್ಯದರ್ಶಿಗಳೊಂದಿಗೆ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.