ಜೈಪುರ ಜುಲೈ 08: ಹೆತ್ತ ತಾಯಿಯ ಸರ್ಕಾರಿ ಉದ್ಯೋಗ ಮತ್ತು ಆಸ್ತಿಯನ್ನು ತನ್ನದಾಗಿಸಿಕೊಳ್ಳಲು 23 ವರ್ಷದ ಸ್ವಂತ ಮಗಳೊಬ್ಬಳು ತನ್ನ ಚಿಕ್ಕಪ್ಪ ಹಾಗೂ ಸೋದರ ಸಂಬಂಧಿಯೊಂದಿಗೆ ಸೇರಿ ₹7 ಲಕ್ಷಕ್ಕೆ ಗುತ್ತಿಗೆ ಕೊಲೆಗಾರರನ್ನು (ಸುಪಾರಿ ಕಿಲ್ಲರ್ಸ್) ನೇಮಿಸಿ, ತಾಯಿಯ ಮೇಲೆ 130 ಕಿ.ಮೀ ವೇಗದಲ್ಲಿ ಎಸ್ಯುವಿ (SUV) ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಪಘಾತ ಎಂದು ಬಿಂಬಿಸಲು ಯತ್ನಿಸಲಾಗಿದ್ದ ಈ ಹತ್ಯಾಕಾಂಡದ ಪಿತೂರಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮಗಳು ಆಯುಷಿ (23), ಆಕೆಯ ಚಿಕ್ಕಪ್ಪ ಮೋಹನ್ ಸ್ವರೂಪ್ (56), ಸುಪಾರಿ ಹಂತಕ ಹೇಮಂತ್ ಶರ್ಮಾ (20) ಹಾಗೂ ಆತನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಎಸ್ಯುವಿ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಆಯುಷಿ ಸೋದರ ಸಂಬಂಧಿ ಬಲರಾಮ್ ಅಲಿಯಾಸ್ ರವಿಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ. ನೀರಜ್ ಶರ್ಮಾ (45) ಕೊಲೆಯಾದ ದುರ್ದೈವಿ ತಾಯಿ.
ಪೊಲೀಸರ ಮಾಹಿತಿ ಪ್ರಕಾರ, ನೀರಜ್ ಅವರ ಪತಿ ವಿಜಯ್ ಕುಮಾರ್ ಶರ್ಮಾ ಅವರು ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿದ್ದು (LDC), ಒಂದು ವರ್ಷದ ಹಿಂದೆ ನಿಧನರಾಗಿದ್ದರು. ತದನಂತರ ಅವರ ಪತ್ನಿ ನೀರಜ್ ಅವರಿಗೆ ಅನುಕಂಪದ ಆಧಾರದ ಮೇಲೆ ಆ ಸರ್ಕಾರಿ ಕೆಲಸ ಸಿಕ್ಕಿತ್ತು. ಆದರೆ, ಆಯುಷಿ ತನಗೆ ಆ ಕೆಲಸ ಸಿಗಬೇಕಿತ್ತೆಂದು ಹಠ ಹಿಡಿದಿದ್ದಳು. “ತಾಯಿಯೇ ತನ್ನ ಭವಿಷ್ಯ ಹಾಳು ಮಾಡಿದ್ದಾಳೆ” ಎಂದು ದೂಷಿಸುತ್ತಿದ್ದ ಆಯುಷಿ, ತಾಯಿಯನ್ನು ಮುಗಿಸಲು ಮೂರು ತಿಂಗಳಿನಿಂದ ಸಂಚು ರೂಪಿಸಿದ್ದಳು. ಕೊಲೆಯನ್ನು ‘ಹಿಟ್ ಅಂಡ್ ರನ್’ ಅಪಘಾತ ಎಂದು ಬಿಂಬಿಸಲು ನಿರ್ಧರಿಸಿದ ಈ ಜಾಲ, ಬಯಾನಾ ನಿವಾಸಿ ಹೇಮಂತ್ ಶರ್ಮನಿಗೆ ₹7 ಲಕ್ಷ ಸುಪಾರಿ ನೀಡಿತ್ತು.
ಜುಲೈ 3 ರಂದು ಸಂಜೆ 4.45 ರ ಸುಮಾರಿಗೆ ನೀರಜ್ ಅವರು ತಮ್ಮ ವಿಕಲಾಂಗ ಮಗನನ್ನು ಕೋಚಿಂಗ್ ಕ್ಲಾಸ್ಗೆ ಬಿಟ್ಟು ಮನೆಗೆ ವಾಪಸ್ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕಾಯುತ್ತಿದ್ದ ಹೇಮಂತ್ ಸಹಚರರು, ಸುಮಾರು 130 ಕಿ.ಮೀ ವೇಗದಲ್ಲಿ ಎಸ್ಯುವಿ ಕಾರನ್ನು ಚಲಾಯಿಸಿಕೊಂಡು ಬಂದು ನೀರಜ್ ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ನೀರಜ್ ಸುಮಾರು 100 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದರು. ಡಿಕ್ಕಿ ಹೊಡೆದ ತಕ್ಷಣ ಕಾರು ವೇಗವಾಗಿ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ನೀರಜ್ ಸಾವಿನ ಬೆನ್ನಲ್ಲೇ ಆಕೆಯ ಸಹೋದರ ರಾಕೇಶ್ ಕುಮಾರ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು. “ತನ್ನ ಮಗಳ ಹಿಂಸಾತ್ಮಕ ಪ್ರವೃತ್ತಿ ಮತ್ತು ಆಸ್ತಿಗಾಗಿ ಆಯುಷಿ, ಮೋಹನ್ ಸ್ವರೂಪ್ ಹಾಗೂ ಬಲರಾಮ್ ನೀಡುತ್ತಿದ್ದ ಕಿರುಕುಳದ ಬಗ್ಗೆ ನೀರಜ್ ಈ ಹಿಂದೆಯೇ ತನಗೆ ತಿಳಿಸಿದ್ದಳು” ಎಂದು ರಾಕೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಜಾಡನ್ನು ಹಿಡಿದು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದಾಗ, ಸ್ವಂತ ಮಗಳೇ ಹೆತ್ತ ತಾಯಿಯನ್ನು ಕೊಂದ ಭೀಕರ ಸತ್ಯ ಹೊರಬಿದ್ದಿದೆ.