Connect with us

    LATEST NEWS

    ಮಂಗಳೂರಿನಲ್ಲಿ ಡಿಸೆಂಬರ್ 1 ರಿಂದ ಆಟೋ ರಿಕ್ಷಾ ದರ ಏರಿಕೆ

    ಮಂಗಳೂರು ನವೆಂಬರ್ 26: ಮಂಗಳೂರಿನಲ್ಲಿ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಆಟೋ ರಿಕ್ಷಾ ದರಗಳನ್ನು ಹೆಚ್ಚಳ ಗೊಳಿಸಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆದೇಶ ಹೊರಡಿಸಿದೆ. ಇದರಿಂದಾಗಿ ಡಿಸೆಂಬರ್ 1 ರಿಂದ ಆಟೋ ದರ ಹೆಚ್ಚಾಗಲಿದೆ.


    ಮೊದಲ 1.5 ಕಿ.ಮೀ. ಕನಿಷ್ಠ ದರ 35ರೂ.ಗಳು (ಗರಿಷ್ಠ 3 ಜನ ಪ್ರಯಾಣಿಕರು), ನಂತರದ ಪ್ರತಿ ಕಿ.ಮೀ. ದರ 20ರೂ.ಗಳು (ಗರಿಷ್ಠ 3 ಜನ ಪ್ರಯಾಣಿಕರು), ಕಾಯುವ ದರ ಮೊದಲ 15 ನಿಮಿಷ ಉಚಿತ, ನಂತರದ 15 ನಿಮಿಷದವರೆಗೆ 5ರೂ.ಗಳು. ಪ್ರಯಾಣಿಕರ ಸರಕಿಗೆ (ಲಗೇಜ್) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆ ಇರಬೇಕು. ಮೊದಲ 20 ಕಿ.ಗ್ರಾಂ. ಗಳಿಗೆ ಉಚಿತ ಹಾಗೂ ನಂತರದ ಪ್ರತಿ 10 ಕಿ.ಗ್ರಾಂ. ಅಥವಾ ಅದರ ಭಾಗಕ್ಕೆ 5ರೂ.ಗಳು. ರಾತ್ರಿ ವೇಳೆ ದರ 10 ಗಂಟೆಯಿಂದ ಬೆಳಗಿನ ಜಾವ 5ರ ವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ. 2022ರ ಡಿಸೆಂಬರ್ 01ರಿಂದ ಒಂದು ತಿಂಗಳೊಳಗೆ ಎಲ್ಲಾ ಆಟೋರಿಕ್ಷಾ ಫೇರ್ ಮೀಟರ್‍ನಲ್ಲಿ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಂಡು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ದೃಢೀಕರಿಸಿಕೊಳ್ಳಬೇಕು.

    ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಿದ ದರ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾಗಳಲ್ಲಿಯೂ ಪ್ರದರ್ಶಿಸಬೇಕು. ಆಟೋರಿಕ್ಷಾ ಚಾಲಕ ಮಾಲೀಕರು ತಮ್ಮ ಆಟೋರಿಕ್ಷಾಗಳ ಪ್ಲಾಗ್ ಮೀಟರ್‍ಲ್ಲಿ ಮರು ನಿಗದಿ ಪಡಿಸಿದ ದರವನ್ನು ರಿಕ್ಯಾಲಿಬರೇಷನ್ ಹಾಗೂ ಸೀಲ್ ಮಾಡಿಸಿಕೊಂಡು ಪ್ರಯಾಣಿಕರಿಂದ ಪ್ರಯಾಣಕ್ಕೆ ತಕ್ಕಂತೆ ಪರಿಷ್ಕರಿಸಿದ ಮೀಟರ್ ದರವನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಪ್ರಯಾಣಿಕರು ಪ್ರಯಾಣಿಸುವ ಸ್ಥಳಗಳಿಗೆ ಹೋಗಲು ನಿರಾಕರಿಸಿದಲ್ಲಿ ಹಾಗೂ ಸಾರ್ವಜನಿಕ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲಿ, ಅಂತಹ ಚಾಲಕರ ವಿರುದ್ಧ ಕಾನೂನಿನಂತೆ ದಂಡ ವಿಧಿಸುವುದು, ಪರವಾನಿಗೆ ಅಮಾನತ್ತು, ರದ್ದತಿ ಕುರಿತು ಕ್ರಮ ಕೈಗೊಳ್ಳುವುದು ಹಾಗೂ ಇತರೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply