LATEST NEWS
ಹಿಂದೂ ಕಾರ್ಯಕರ್ತನ ಮೇಲೆ ಗಂಭೀರ ಹಲ್ಲೆ : ಬಜರಂಗದಳದ ಮೂವರು ಅರೆಸ್ಟ್…
ಉಡುಪಿ ಮಾರ್ಚ್ 17 : ಕಾರ್ಕಳದಲ್ಲಿ ಹಿಂದೂ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕಾರ್ಕಳದ ಬಜರಂಗದಳದ ಸಂಚಾಲಕ ಸುನಿಲ್ ನಿಟ್ಟೆ, ಕಾರ್ಕಳ ಬಜರಂಗದಳದ ಗೋರಕ್ಷಾ ಪ್ರಮುಖ್ ಪ್ರಸಾದ ನಿಟ್ಟೆ, ಸಾಣೂರು ಭಜರಂಗದಳ ಸಂಚಾಲಕ ಶರತ್ ನಿಟ್ಟೆ ಎಂದು ಗುರುತಿಸಲಾಗಿದೆ.
ಆರೋಪಿಗಳು ಮಾರ್ಚ್ 14 ರ ರಾತ್ರಿ ನಿಟ್ಟೆಯಲ್ಲಿರುವ ಅನಿಲ್ ಪೂಜಾರಿ ಅವರ ಮನೆಗೆ ನುಗ್ಗಿ ಕತ್ತಿಯಿಂದ ಹಲ್ಲೆ ನಡೆಸಿತ್ತು. ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳು ಬೆಳುವಾಯಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ತಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನಿಲ್ ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದರು ಎಂಬ ಸಿಟ್ಟಿನಿಂದ ದಾಳಿ ನಡೆಸಿದ್ದು, ಲವ್ ಜಿಹಾದ್ ಪ್ರಕರಣವೊಂದರ ಪತ್ತೆ ಸಂಬಂಧಿಸಿ ಎರಡು ಸಂಘಟನೆಗಳ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕೆ ಅನಿಲ್ ಎಂಬವರ ಮನೆಗೆ ನುಗ್ಗಿ ಹೆತ್ತವರ ಮುಂದೆ ಕೊಲೆಯತ್ನ ನಡೆಸಿ, ಗಂಭೀರವಾಗಿ ಹಲ್ಲೆ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿದ್ದ ಅನಿಲ್ ಅವರ ತಾಯಿಯನ್ನು ಕಾಲಿನಿಂದ ತುಳಿದು ಘಾಸಿಗೊಳಿಸಿ ವಿಕೃತಿ ಮೆರೆದಿದ್ದರು. ಬಳಿಕ ದಾಳಿಗೆ ಒಳಗಾಗಿದ್ದ ಅನಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಬಂಧಿಸಲಾಗಿದೆ.