ಮಂಜೇಶ್ವರ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ 

ಮಂಗಳೂರು ಜನವರಿ 4: ಕಾಸರಗೋಡಿನಲ್ಲಿ ಮುಂದುವರೆದ ಶಬರಿಮಲೆ ಗಲಾಟೆ, ಗಡಿಭಾಗದಲ್ಲಿ ಐವರು ಅಯ್ಯಪ್ಪ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆಗೈದ ಘಟನೆ ನಡೆದಿದೆ.

ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶದ ನಂತರ ಕೇರಳದಲ್ಲಿ ಉಂಟಾದ ಘರ್ಷಣೆ ಇನ್ನೂ ತಣ್ಣಗಾಗಿಲ್ಲ. ಕೇರಳದ ಕಾಸರಗೋಡಿನಲ್ಲಿ ಇಂದೂ ಕೂಡ ಹಿಂಸಾಕೃತ್ಯ ಮುಂದುವರೆದಿದ್ದು, ಕಾಸರಗೋಡು ಗಡಿಭಾಗ ಮಂಜೇಶ್ವರ ಕುಂಜತ್ತೂರಿನಲ್ಲಿ ಐವರು ಅಯ್ಯಪ್ಪಮಲಾಧಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ  ಅಯ್ಯಪ್ಪ ಮಾಲಾಧಾರಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ್, ಶರತ್, ರಾಜೇಶ್, ನಿತೇಶ್, ಗುಣಪಾಲ್ ಹಲ್ಲೆಗೊಳಗಾದ ಅಯ್ಯಪ್ಪ ಮಾಲಾಧಾರಿಗಳು ಎಂದು ಗುರುತಿಸಲಾಗಿದೆ.

ಅಷ್ಟೇ ಅಲ್ಲದೆ ಕಡಂಬಾರು ದೇವಸ್ಥಾನದ ಬಳಿಯಿದ್ದ ಇಬ್ಬರು ಯುವಕರ ಮೇಲೂ ತಲ್ವಾರ್‍ನಿಂದ ಹಲ್ಲೆ ಮಾಡಲಾಗಿದೆ. ಘಟನೆ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಡಿ ನೀಡಿ ಪರಿಶೀಲನೆ ನಡೆಸಿದ್ದು, ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮಂಜೇಶ್ವರದಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೆ ಮಂಜೇಶ್ವರ ತಾಲೂಕಿನಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದ್ದು, ಮಂಜೇಶ್ವರ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹಿಂಸಾಚಾರ ಕೋಮುದ್ವೇಷಕ್ಕೆ ತಿರುಗದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.

2 Shares

Facebook Comments

comments