LATEST NEWS
ಕತಾರ್ ಮೇಲೆ ಇರಾನ್ ದಾಳಿ – ಮಂಗಳೂರಿನಿಂದ ಹೊರಡುವ ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು, ಜೂನ್ 24: ಕತಾರ್ ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಮಂಗಳೂರಿನಿಂದ ಹೊರಡುವ ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರಿಗೆ ವಿಮಾನ ನಿಲ್ದಾಣ ತಮ್ಮ ವಿಮಾನಗಳ ಬಗ್ಗೆ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯಿಂದ ಮಾಹಿತಿಯನ್ನು ಪಡೆಯಲು ತಿಳಿಸಿದೆ.
ಮಂಗಳೂರಿನಿಂದ ಹೊರಟಿದ್ದ ಎರ್ ಇಂಡಿಯಾ ಎಕ್ಸ್‌ಪ್ರೆಸ್ ದಮ್ಮಾಮ್‌ಗೆ ಹೋಗುವ ಬದಲು ಮುಸ್ಕತ್ ಕಡೆ ತಿರುಗಿಸಲಾಗಿತ್ತು. ಅಬುದಾಭಿಗೆ ಹೋಗುವ ಇಂಡಿಗೋ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿತ್ತು. ಇದೀಗ ಎರಡೂ ವಿಮಾನಗಳು ಮಂಗಳೂರಿಗೆ ವಾಪಸ್ ಆಗಿವೆ.

ಇರಾನ್ ಮಿಸೈಲ್ ದಾಳಿ ಮಾಡಿದ ಕಾರಣ ಮಧ್ಯಪ್ರಾಚ್ಯದ ದೇಶಗಳು ವಾಯುಮಾರ್ಗಗಳನ್ನು ಬಂದ್ ಮಾಡಿವೆ. ಅಲ್ಲಿನ ವಿಮಾನಯಾನ ವಲಯ ಮುಚ್ಚಲ್ಪಟ್ಟ ಕಾರಣ ವಿಮಾನಗಳು ಮಂಗಳೂರಿಗೆ ವಾಪಸಾಗಿವೆ.
ಮಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿರುವ ಬಗ್ಗೆ ಏರ್ಪೋರ್ಟ್ ಆಡಳಿತ ಮಾಹಿತಿ ನೀಡಿದೆ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.
ಇಸ್ರೇಲ್ ಇರಾನ್ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಅಮೆರಿಕ ಕೂಡ ಇರಾನ್ನ ಪರಮಾಣು ಘಟಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಸೇನೆ, ಕೊಲ್ಲಿ ರಾಷ್ಟ್ರ ಕತಾರ್ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಾಹಿತಿ ನೀಡಿದ್ದು, ಇರಾನ್ ದಾಳಿಯಿಂದ ಅಮೆರಿಕ ನೆಲೆಗಳಿಗೆ ಏನೂ ಹಾನಿಯಾಗಿಲ್ಲ ಎಂದಿದ್ದಾರೆ..
1 Comment