ಛತ್ತೀಸ್ ಗಢ ನವೆಂಬರ್ 04: ಛತ್ತೀಸ್‌ಗಢದ ಬಿಲಾಸ್ಪುರ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲೊಂದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನಲ್ಲಿ ಐದು ಮಂದಿ ಪ್ರಯಾಣಿಕರು ಸಾವನಪ್ಪಿದ ಘಟನೆ ನಡೆದಿದೆ.

ಸಂಜೆ 4 ಗಂಟೆ ಸುಮಾರಿಗೆ MEMU ಪ್ಯಾಸೆಂಜರ್ ರೈಲು ಗೆವ್ರಾದಿಂದ ಬಿಲಾಸ್ಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಗಟೋರಾ ಮತ್ತು ಬಿಲಾಸ್ಪುರ್ ರೈಲು ನಿಲ್ದಾಣಗಳ ನಡುವೆ ಇದ್ದಾಗ, ಪ್ಯಾಸೆಂಜರ್ ರೈಲು ಹಿಂದಿನಿಂದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಪ್ಯಾಸೆಂಜರ್ ರೈಲಿನ ಮುಂಭಾಗದ ಬೋಗಿಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.

ದುರಂತದಲ್ಲಿ 5 ಮಂದಿ ಸಾವನ್ನಪ್ಪಿದ್ದು 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಜನೀಶ್ ಸಿಂಗ್ ದೃಢಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ. ಅಪಘಾತದ ಸ್ಥಳದಿಂದ ಬಂದ ದೃಶ್ಯಗಳು ಪ್ಯಾಸೆಂಜರ್ ರೈಲಿನ ಎಂಜಿನ್ ಮತ್ತು ಪ್ರಮುಖ ಬೋಗಿಗಳು ನಜ್ಜುಗುಜ್ಜಾಗಿರುವುದನ್ನು ತೋರಿಸುತ್ತವೆ. ರಕ್ಷಣಾ ಸಿಬ್ಬಂದಿ ಅವಶೇಷಗಳಲ್ಲಿ ಸಿಲುಕಿರುವ ಬದುಕುಳಿದವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.



