ನೇಪಾಳ ಫೆಬ್ರವರಿ 23: ಪ್ರಯಾಣಿಕ ಬಸ್ ಒಂದು ತ್ರಿಶೂಲಿ ನದಿಗೆ ಬಿದ್ದ ಪರಿಣಾಮ 18 ಜನರು ಸಾವನಪ್ಪಿದ ಘಟನೆ ನೇಪಾಳ ರಾಜಧಾನಿಯಿಂದ ಸುಮಾರು 90 ಕಿ.ಮೀ ದೂರದಲ್ಲಿ ಸಂಭವಿಸಿದೆ.

ಪೋಖರಾದಿಂದ ಕಠ್ಮಂಡುವಿಗೆ ಬರುತ್ತಿದ್ದ ಬಸ್ ಬೆಳಗಿನ ಜಾವ 1.30 ಕ್ಕೆ ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಪೃಥ್ವಿ ಹೆದ್ದಾರಿಯಲ್ಲಿ ತ್ರಿಶೂಲಿ ನದಿಗೆ ಬಿದ್ದು ಈ ಅಪಘಾತ ಸಂಭವಿಸಿದೆ.

ಅಪಘಾತ ಸ್ಥಳದಿಂದ 18 ಶವಗಳನ್ನು ಹೊರತೆಗೆಯಲಾಗಿದ್ದು, ಬಸ್ಸಿನಿಂದ 28 ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಸಶಸ್ತ್ರ ಪೊಲೀಸ್ ಪಡೆ ವಕ್ತಾರ ಬಿಷ್ಣು ಪ್ರಸಾದ್ ಭಟ್ಟ ತಿಳಿಸಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ನ್ಯೂಜಿಲೆಂಡ್ನ ಪುರುಷ ಪ್ರಯಾಣಿಕರೊಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಜಪಾನಿನ ಮಹಿಳೆ ಮತ್ತು ಡಚ್ ಪ್ರಜೆಯೊಬ್ಬರು ಸೇರಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅತಿ ವೇಗದ ಚಾಲನೆಯೇ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್ನಲ್ಲಿ ಕೆಲವು ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 40 ರಿಂದ 45 ಪ್ರಯಾಣಿಕರಿದ್ದರು.
ಬಸ್ ಪೃಥ್ವಿ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. ಬೇನಿಘಾಟ್ ರೋರಾಂಗ್ ಗ್ರಾಮೀಣ ಪುರಸಭೆ -5 ರ ಭೈಸೆಪತಿ ಪ್ರದೇಶದ ಬಳಿ ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ವಾಹನವು ರಸ್ತೆಯಿಂದ ಜಾರಿ, ಸುಮಾರು 300 ಮೀಟರ್ ಇಳಿಜಾರಿನಲ್ಲಿ ಉರುಳಿ ನದಿಯ ದಡದಲ್ಲಿ ಬಿದ್ದಿದೆ. ಬಸ್ ತೀವ್ರವಾಗಿ ಹಾನಿಗೊಳಗಾಗಿದೆ.