ವಾಷಿಂಗ್ಟನ್/ಅಬುಧಾಬಿ: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ 12 ಯುಎಸ್ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಅಬುಧಾಬಿಯಲ್ಲಿ ಇರಾನ್ ಉಡಾಯಿಸಿದ ಕ್ಷಿಪಣಿಯನ್ನು ಪ್ರತಿಬಂಧಿಸಿದ ವೇಳೆ ಬಿದ್ದ ಅವಶೇಷಗಳಿಂದಾಗಿ ಐವರು ಭಾರತೀಯರು ಗಾಯಗೊಂಡಿರುವುದು ಆತಂಕ ಮೂಡಿಸಿದೆ.

ಫ್ಲೋರಿಡಾದ ಮಿಯಾಮಿ ಬೀಚ್ನಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಯುದ್ಧ ಇನ್ನೂ ಮುಗಿದಿಲ್ಲ. ಇರಾನ್ನಲ್ಲಿ ನಾವು ಧ್ವಂಸಗೊಳಿಸಬೇಕಾದ ಇನ್ನೂ 3,554 ಗುರಿಗಳು ಬಾಕಿ ಇವೆ. ಶೀಘ್ರದಲ್ಲೇ ಈ ಕಾರ್ಯ ಮುಗಿಯಲಿದೆ,” ಎಂದು ಗುಡುಗಿದ್ದಾರೆ.
ಅಬುಧಾಬಿಯ ಖಲೀಫಾ ಆರ್ಥಿಕ ವಲಯದ (KEZAD) ಬಳಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ. ಆದರೆ, ಅದರ ಅವಶೇಷಗಳು ಬಿದ್ದ ರಭಸಕ್ಕೆ ಅಲ್ಲಿ ಕೆಲಸ ಮಾಡುತ್ತಿದ್ದ ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ದೃಢಪಡಿಸಿದೆ. ಸೌದಿಯ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡ ಇಬ್ಬರು ಅಮೆರಿಕನ್ ಸೈನಿಕರ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.