ಗ್ಯಾಂಗ್ ರೇಪ್ ಪ್ರಕರಣ – ಸಂತ್ರಸ್ಥೆಯ ದೂರು ದಾಖಲಿಸಲು ನಿರಾಕರಿಸಿದ ಎಎಸ್ ಐ ಅಮಾನತು
ಮಂಗಳೂರು ನವೆಂಬರ್ 29: ಮಂಗಳೂರಿನ ತಣ್ಣೀರುಬಾವಿ ಬೀಚ್ ಬಳಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಸಂತ್ರಸ್ಥೆಯ ದೂರು ದಾಖಲಿಸಲು ನಿರಾಕರಿಸಿ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣಾ ಎ ಎಸ್ ಐ ಅವರನ್ನು ಅಮಾನತು ಗೊಳಿಸಲಾಗಿದೆ.
ಬಂಟ್ವಾಳ ಠಾಣಾ ಎ ಎಸ್ ಐ ರಘುರಾಮ ಹೆಗ್ಡೆ ಅಮಾನತಾದ ಅಧಿಕಾರಿ. ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಮಾನತುಗೊಳಿಸಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಯಲ್ಲಿ ರಘುರಾಮ ಅವರನ್ನು ಅಮಾನತುಗೊಳಿಸಲಾಗಿದೆ.
ನವೆಂಬರ್ 18 ರಂದು ತಣ್ಣೀರು ಭಾವಿ ಪರಿಸರದಲ್ಲಿ ಸಂತ್ರಸ್ಥೆ ಯುವತಿ ತನ್ನ ಮೇಲೆ ಯುವಕರಿಂದ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಪ್ರಕರಣ ದಾಖಲಿಸಲು ಬಂಟ್ವಾಳ ನಗರ ಪೊಲೀಸು ಠಾಣೆಯಲ್ಲಿ ನವೆಂಬರ್ 20 ರಂದು ದೂರು ನೀಡಲು ಹೋಗಿದ್ದರು. ಆಗ ಅಲ್ಲಿ ಹಗಲು ಠಾಣಾ ದಿನಚರಿ ಕರ್ತವ್ಯದಲ್ಲಿದ್ದ ಎಎಸ್ಐ ರಘುರಾಮ ಹೆಗ್ಡೆರವರು ತಕ್ಷಣಕ್ಕೆ ದೂರನ್ನು ದಾಖಲಿಸಲು ನಿರಾಕರಿಸಿದ್ದಾರೆ ಮತ್ತು ಘಟನೆ ಎಲ್ಲಿ ಸಂಭವಿಸಿದೆಯೋ ಅದೇ ವ್ಯಾಪ್ತಿಯ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿ ಸಂತ್ರಸ್ಥೆಯನ್ನು ಹಿಂದೆ ಕಳುಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಘುರಾಮ ಹೆಗ್ಡೆ ಅವರನ್ನು ಕರ್ತವ್ಯ ನಿರ್ಲಕ್ಷ ಆರೋಪದಡಿ ಸೇವೆಯಿಂದ ಅಮಾನತುಗೊಳಿಸಿ, ವಿಚಾರಣೆಗೆ ಆದೇಶಿಸಲಾಗಿದೆ.