ಮುರುಡೇಶ್ವರ ಬೃಹತ್ ಶಿವ ವಿಗ್ರಹದ ಕಲಾವಿದನಿಗೆ ಈಗ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ… !!

ಕುಂದಾಪುರ : ತನ್ನ ಕಲಾ ನೈಪುಣ್ಯದ ಮೂಲಕ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಶಿಲ್ಪಿಯೊಬ್ಬನ ಬದುಕ ಕಳಾಹೀನವಾಗಿದೆ. ಹಾಸಿಗೆಯಿಂದ ಎದ್ದೇಳಲಾರದ ಅಮ್ಮ ,ಅಪಘಾತದಿಂದ ಕೈಯ ಶಕ್ತಿ ಕಳಕೊಂಡ ಕಲಾವಿದ ತನ್ನ ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದಾರೆ.

ಇವರ ಹೆಸರು ರಾಜು ಅಪ್ರತಿಮ ಸಿಮೆಂಟ್ ಶಿಲ್ಪ ಕಲಾವಿದ. ದೇಶದ ಮೂಲೆ ಮೂಲೆಯವರೆಗೂ ಸಂಚರಿಸಿ ತನ್ನ ಕಲಾ ನೈಪುಣ್ಯ ಮೆರೆದಾತ. ಒಂದು ಕೆಟ್ಟ ಘಳಿಗೆಯಲ್ಲಿ ನಡೆದ ಅಪಘಾತದಲ್ಲಿ ತನ್ನ ಕಲಾ ಜೀವನದ ಪ್ರಮುಖ ಆಸ್ತಿ ತನ್ನ ಬಲ ಗೈಯ ಬಲವನ್ನೇ ಕಳಕೊಂಡ ಇವರು  ರಾಜ್ಯ ಕಂಡ ಅದ್ಭುತ ಕಲಾವಿದ ಸಾಯಿನಾಥ ರ ಶಿಷ್ಯ.

ಧರ್ಮಸ್ಥಳ ಕುಂಭಾಶಿ ಸೊರಬ ಬೈಂದೂರು ದೆಹಲಿ ಮುಂಬೈ, ಉತ್ತರ ಪ್ರದೇಶ ಹೀಗೆ ದೇಶಾದ್ಯಂತ ಹತ್ತು ಹಲವು ಕಡೆಗಳಲ್ಲಿ ತನ್ನ ಕಲಾ‌ನೈಪುಣ್ಯ ಮೆರೆದಿದ್ದಾರೆ. ಮುರುಡೇಶ್ವರದ ಬೃಹತ್ ಶಿವನ ವಿಗ್ರಹದ ಕೆಲಸ ಮಾಡುತ್ತಿರುವ ಸಂದರ್ಭ ನಡೆದ ಒಂದು ಅಪಘಾತದಲ್ಲಿ ಆತನ ಬಲಗೈ ಸಂಪೂರ್ಣವಾಗಿ ಜರ್ಝರಿತವಾಯಿತು.

ಅದೆಷ್ಟೋ ಸುಂದರ ದೇವಾನುದೇವತೆಗಳ ಸುಂದರ ಅಂಗ ರಚನೆ ಮಾಡಿದ ರಾಜು ಅವರ ಅಂಗ ಶಾಶ್ವತವಾಗಿ ಬಲಾ ಹೀನವಾಯಿತು. ಸದ್ಯ ಕುಂದಾಪುರದ ಕುಂಭಾಸಿಯ ವಿನಾಯಕ ನಗರ ಕಾಲೊನಿಯಲ್ಲಿ ತನ್ನ ತಾಯಿಯೊಂದಿಗೆ ವಾಸಮಾಡುತ್ತಿದ್ದಾರೆ. ತಾಯಿ ವಯೋ ಸಹಜ ಖಾಯಿಲೆಯಿಂದ ಹಾಸಿಗೆ ಬಿಟ್ಟೇಳಲಾಗದ ಸ್ಥಿತಿಯಲ್ಲಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ರಾಜು ಅವರ ಪರಿಸ್ಥಿತಿ ಲಾಕ್ ಡೌನ್ ನಿಂದಾಗಿ ಮತ್ತಷ್ಟು ಹದಗೆಟ್ಟಿದೆ.

ಮುರುಡೇಶ್ವರದ ಬೃಹತ್ ಶಿವನ ವಿಗ್ರಹವನ್ನು ನೋಡದವರು ಬಹಳ ಕಡಿಮೆ ಇಂತಹ ಅನೇಕ ಕಲಾಕೃತಿಗಳನ್ನು ರಚಿಸಿರುವ ಖ್ಯಾತ ಕಲಾವಿದ ಇಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವುದು ದೌರ್ಭಾಗ್ಯವೇ ಸರಿ. ಹೇಳಿಕೊಳ್ಳೋಕೆ ಇವರು ಇರೋದು ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ವಿನಾಯಕನ ಕ್ಷೇತ್ರದ ಸಮೀಪದ ಕಾಲೊನಿಯಲ್ಲಿ.ಕುಂಭಾಸಿ ದ್ವಾರದ ಕೆಲಸ ಮಾಡಿದ್ದೂ ಇವರೇ..ಆದರೆ ಈ ಕಲಾವಿದ ಕಷ್ಟದ ಸಮಯದಲ್ಲಿ ಯಾರೂ ಕೂಡ ಸಹಾಯಕ್ಕೆ ಬರದೇ ಇರೊಂದು ವಿಪರ್ಯಾಸವೇ ಸರಿ. ದಿನನಿತ್ಯ ಒಂದಷ್ಟು ಜನರಿಗೆ ಸಹಾಯ ಮಾಡಿದ್ದೇವೆ ಅಂತ ಹೇಳಿಕೆಯಲ್ಲಿ ಬಿಸಿ ಆಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ. ರಾಜು ಮತ್ತು ಅವರ ಅಮ್ಮನ ಚಿಕಿತ್ಸೆಗಾಗಿ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕು.