ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ರೀತಿಯಲ್ಲೆ ಉಡುಪಿಯಲ್ಲಿ ಮತ್ತೊಂದು ಕೊಲೆ

ಉಡುಪಿ ನವೆಂಬರ್ 19: ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ರೀತಿಯಲ್ಲೇ ಮತ್ತೊಂದು ಕೊಲೆ ಉಡುಪಿಯಲ್ಲಿ ನಡೆದಿದೆ. ಈ ಭಾರಿ ಸ್ವಂತ ಅಣ್ಣನೇ ತಮ್ಮನ್ನು ಕೊಲೆ ಗೈದ ಮೃತದೇಹವನ್ನು ಸುಟ್ಟು ಹಾಕಿದ್ದಾನೆ.

ಎಂಟು ತಿಂಗಳ ಹಿಂದೆ ನಡೆದ ಕಾರ್ಕಳ ಮಂಗಳಪಾದೆಯ ಅವಿಲ್ ಡಿಸೋಜ (24) ನಾಪತ್ತೆ ಪ್ರಕರಣದ ಬೆನ್ನು ಹತ್ತಿದ್ದ ಉಡುಪಿ ಪೊಲೀಸರಿಗೆ ಆಘಾತಕಾರಿ ವಿಷಯ ತಿಳಿದು ಬಂದಿದೆ. ಅವಿಲ್ ಡಿಸೋಜಾರನ್ನು ಅವರ ಸ್ವಂತ ಅಣ್ಣನೇ ಆಸ್ತಿ ವಿಚಾರದಲ್ಲಿ ಕೊಲೆಗೈದು ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷನಾಶ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಆರೋಪಿ ಮೃತರ ಅಣ್ಣ ಮೆಲ್ವಿನ್ ಸಂತೋಷ್ ಡಿಸೋಜ(31) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಅವಿಲ್ ಡಿಸೋಜ ಗುಡ್‌ಪ್ರೈಡೇ ದಿನ ಮನೆಯಿಂದ ನಾಪತ್ತೆಯಾಗಿರುವುದಾಗಿ ಅವರ ತಂದೆ ಅಲ್ಬರ್ಟ್ ಡಿಸೋಜ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೆಲ್ವಿನ್ ಡಿಸೋಜನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ತಂದೆ ತಾಯಿಯ ಆಸ್ತಿ ವಿಚಾರದಲ್ಲಿ ಅವಿಲ್ ಹಾಗೂ ಮೆಲ್ವಿನ್ ಮಧ್ಯೆ ಮನೆಯಲ್ಲಿ ಜಗಳ ನಡೆದಿತ್ತು. ಈ ವೇಳೆ ಮೆಲ್ವಿನ್ ಚೂರಿಯಿಂದ ಇರಿದು, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಅವಿಲ್ ಡಿಸೋಜನನ್ನು ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಮನೆಯ ಸಮೀಪದ ರಾಮ ಸಮುದ್ರದ ಕರೆಯ ದಡಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments