ಮಂಗಳೂರು ಸೆಪ್ಟೆಂಬರ್ 21: ಹಿಂದೂ ಉಪಜಾತಿಗಳ ಜೊತೆ ಸೇರಿಸಿರುವ ಕ್ರಿಶ್ಚಿಯನ್ ಪದಗಳನ್ನು ಕೈಬಿಡದಿದ್ದರೆ ಸಮೀಕ್ಷೆ ಬಹಿಷ್ಕಾರಕ್ಕೆ ಕರೆ ನೀಡಲು ಚಿಂತನೆ ನಡೆದಿದೆ’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು

ನಗರದ ಬಾಲಂ ಭಟ್ ಹಾಲ್ ರಾಧಾಕೃಷ್ಣ ಮಂದಿರದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಮೊದಲಿಗೆ ಸರಕಾರ ತಾವು ಜಾತಿ ಜನಗಣತಿ ನಡೆಸುತ್ತೇವೆ ಎಂದಿತ್ತು. ಆ ಬಳಿಕ ಅದನ್ನು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಹೇಳುತ್ತಿದೆ. ಆದ್ದರಿಂದ ಸರಕಾರ ತನಗಿರುವ ಗೊಂದಲವನ್ನು ಪರಿಹರಿಸಿ ಜನಗಣತಿ ಮಾಡಲಿ. ಅಲ್ಲದೆ ಜಾತಿಜನಗಣತಿಯನ್ನು ಕೇಂದ್ರ ಸರಕಾರ ನಡೆಸುವುದು ನಿಯಮ. ಆದ್ದರಿಂದ ಕೇಂದ್ರ ಸರಕಾರವೇ ಜಾತಿ ಜನಗಣತಿ ನಡೆಸಿ ರಾಜ್ಯ ಸರಕಾರ ಅದಕ್ಕೆ ಸಂಪನ್ಮೂಲ, ಮಾಹಿತಿಗಳನ್ನಷ್ಟೇ ಒದಗಿಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರ ತಕ್ಷಣ ಆಯೋಗಕ್ಕೆ ಸೂಚನೆ ನೀಡಿ ಪಟ್ಟಿಯಿಂದ 47 ಉಪಜಾತಿಗಳ ಕೈಬಿಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈಗಿನಂತೆ ಸಮೀಕ್ಷೆ ನಡೆದಲ್ಲಿ ಮುಂದೆ ಮೀಸಲಾತಿಯಲ್ಲಿ ಏರುಪೇರು ಆಗುವ ಅಪಾಯ ಇದೆ. ಆಯೋಗದ ಈ ನಿರ್ಧಾರ ಮತಾಂತರಕ್ಕೆ ಪ್ರೇರಣೆ ನೀಡಿದಂತಾಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ ಎಂದರು. ಯಾವುದೇ ಬಿಷಪ್‌ಗಳು ಈ ಹಿಂದೂ ಕ್ರಿಶ್ಚಿಯನ್ ಜಾತಿಗಳ ಬಗ್ಗೆ ಈವರೆಗೆ ಹೇಳಿಕೆ ನೀಡಿಲ್ಲ. ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿದರೆ ಅವರಿಗೆ ಮೀಸಲಾತಿ ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಘೋಷಿಸಬೇಕು ಎಂದು ಸಭೆ ಆಗ್ರಹಿಸಿದೆ ಎಂದರು.
ಮಾಡೂರು ಶಿವಗಿರಿ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಕಾಣಿಯೂರು ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ, ಗುರುಪುರ ಜಂಗಮ ಮಠದ ರುದ್ರಮುನಿ ಮಹಾಸ್ವಾಮೀಜಿ, ಓಂಶ್ರೀ ಮಠದ ಮಾತಾಶ್ರೀ ಓಂಶ್ರೀ ಶಿವಜ್ಞಾನಮಯಿ ಸರಸ್ವತಿ, ಓಂಶ್ರೀ ವಿದ್ಯಾನಂದ ಸರಸ್ವತಿ, ಶಿವಾನಂದ ಸ್ವಾಮೀಜಿ ಮುಳಿಯ, ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಶ್ರೀಪಾದ, ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೆ.ಟಿ. ಉಲ್ಲಾಸ್ ಭಾಗವಹಿಸಿದ್ದರು.



