ಆಂಧ್ರಪ್ರದೇಶ ಫೆಬ್ರವರಿ 14: ತಡೆಗೊಡೆಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕದ ಯಾದಗಿರಿ ಜಿಲ್ಲೆಯ ಮೂವರು ಸಾವನಪ್ಪಿದ ಘಟನೆ ಆಂಧ್ರಪ್ರದೇಶದ ಜಡಚರ್ಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕುಟುಂಬಸ್ಥರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಹೋಗುತ್ತಿದ್ದ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಕುಟುಂಬವು ನಿನ್ನೆ (ಶುಕ್ರವಾರ) ಯಾದಗಿರಿ ನಗರದಲ್ಲಿ ಮೊಮ್ಮಗನ ಜವಳ ಮುಗಿಸಿಕೊಂಡು ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಕ್ರೂಸರ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ತಡೆಗೋಡೆಗೆ ಡಿಕ್ಕಿಯಾಗಿ ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಮತ್ತು ವಿಜಯಪುರ ಮೂಲದ ಮಹದೇವಪ್ಪ (65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದು ಬಂದಿದೆ. ಕಾರು ಚಲಿಸುತ್ತಿದ್ದ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.