ಬೆಂಗಳೂರು ಮಾರ್ಚ್ 31: ಐಟಿ ಹಬ್ನಲ್ಲಿ ನೆಲೆಸಿದ್ದ ತೆಲಂಗಾಣ ಮೂಲದ ಟೆಕ್ಕಿ ದಂಪತಿಗಳು ತಮ್ಮ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಪತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಬೆನ್ನಲ್ಲೇ, ಪತ್ನಿ 17ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ.

ತೆಲಂಗಾಣದ ಸಿದ್ದಿಪೇಟೆ ಮೂಲದ ಭಾನು ಚಂದರ್ ರೆಡ್ಡಿ ಕುಂಟಾ (32) ತಮ್ಮ ವಾಸದ ಮನೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ದೀರ್ಘಕಾಲದವರೆಗೆ ಬಾಗಿಲು ತೆರೆಯದಿದ್ದಾಗ ಆತಂಕಗೊಂಡ ಪತ್ನಿ ಬೀಬಿ ಶಾಜಿಯಾ ಸಿರಾಜ್ (31), ಸೆಕ್ಯೂರಿಟಿ ಸಿಬ್ಬಂದಿ ಹಾಗೂ ನೆರೆಹೊರೆಯವರ ಸಹಾಯ ಕೋರಿದ್ದರು. ಬಾಗಿಲು ಮುರಿದು ಒಳಹೋದಾಗ ಪತಿಯ ಮೃತದೇಹ ಕಂಡುಬಂದಿದೆ.
ಪತಿಯ ಸಾವಿನ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾದ ಶಾಜಿಯಾ, ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅದೇ ವಸತಿ ಸಂಕೀರ್ಣದ 17ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಶಾಜಿಯಾ ಅವರು ಪ್ರತಿಷ್ಠಿತ ಐಬಿಎಂ (IBM) ಸಂಸ್ಥೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮೃತರ ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. “ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ದಂಪತಿಗಳ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.