ಕನ್ನಡದ ಖ್ಯಾತ ನಟಿ ಅನುಶ್ರೀ ಅವರಿಗೆ ಇತ್ತೀಚೆಗೆ ಟ್ರೋಲರ್ ಗಳ ಕಾಟ ಜೋರಾಗಿದೆ. ಈ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ಕನಕದಾಸರ ಪದವನ್ನು ಹೇಳಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.


ಸದ್ಯ ಕರ್ನಾಟಕ ನಂಬರ್ ಒನ್ ಆ್ಯಂಕರ್ ಆಗಿರುವ ಅನುಶ್ರೀ ಅವರು ಇತ್ತೀಚೆಗೆ ಉದ್ಯಮಿ ರೋಶನ್ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗೆ ಅನುಶ್ರೀ ಅವರ ಮಾತುಗಳನ್ನು ಹಲವರು ಟ್ರೋಲ್‌ ಮಾಡಿ, ವಿಡಿಯೊ, ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಈ ನಡುವೆ ನಿರೂಪಕಿ ಅನುಶ್ರೀ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೊದಲ್ಲಿ ಅವರು, ‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯ್ಯುವರೆಲ್ಲ ಅಂದಣವಿರಲಿ, ಕುಂದು ಇಟ್ಟವರೆಲ್ಲಾ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಬತ್ತದ ಗದ್ದೆ ಬೆಳೆಯಲಿ, ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪ ಸಕ್ಕರೆ ಊಟ ಆಗಲಿ, ಅವರಿಗೆ ಹಾನಿ ಬಾರದಂತಹ ಲೋಕ ಆಗಲಿ, ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು’ ಎಂದು ಕನಕದಾಸರ ಸಾಲುಗಳನ್ನು ಹೇಳಿದ್ದಾರೆ.

‘ಇವತ್ತು ಯಾಕೋ ಗೊತ್ತಿಲ್ಲ ಕನಕದಾಸರ ಪದ್ಯದ ಸಾಲು ನನಗೆ ನೆನಪಾಯಿತು. 2026ರಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಅಂತ ಆಶಿಸುತ್ತೇನೆ. ಒಳ್ಳೆಯದೇ ಮಾತಾಡೋಣ, ಒಳ್ಳೆಯದೇ ಯೋಚಿಸೋಣ, ಒಳ್ಳೆಯದೇ ಬಯಸೋಣ’ ಎಂದು ಹೇಳಿದ್ದಾರೆ.

ಅದರ ಜೊತೆಗೆ ‘ಇತರರ ಬಗ್ಗೆ ಅಹಿತಕರವಾದ ಮಾತು.. ಈ ವರ್ಷವಾದರೂ ಹಿತವಾಗಲಿ. ಸಾಮಾಜಿಕ ಮಾಧ್ಯಮವನ್ನು ಒಳ್ಳೆಯದಕ್ಕಾಗಿ ಬಳಸಿ ಮತ್ತು ಇತರರನ್ನು ಮೇಲಕ್ಕೆತ್ತಿ, ಅವರನ್ನು ಕೆಡವಬೇಡಿ’ ಎಂದು ಬರೆದುಕೊಂಡಿದ್ದಾರೆ.

Share Information