ಕುಂದಾಪುರ ಅಮೋನಿಯಾ ಸೋರಿಕೆ 70 ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥ

ಉಡುಪಿ ಅಗಸ್ಟ್ 12: ಕುಂದಾಪುರ ಸಮೀಪದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆಯಿಂದಾಗಿ 70 ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲ್ಕುಂದದಲ್ಲಿ ಮಲ್ಪೆ ಫ್ರೆಶ್ ಮರೈನ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನ ಮೀನು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ 5.30 ರಿಂದ 6 ಗಂಟೆ ಯ ನಡುವೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಬೆಳಿಗ್ಗೆ ಕಾರ್ಖಾನೆಯ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಮೋನಿಯಾ ದ್ರಾವಣ ಸರಬರಾಜು ಮಾಡುವ ಪೈಪ್‌ನ ಟ್ಯಾಪ್‌ನಲ್ಲಿ ಸೋರಿಕೆಯಾಗುವುದು ಬೆಳಕಿಗೆ ಬಂದಿತ್ತು. ಇದನ್ನು ಗಮನಿಸಿದ್ದ ಸಿಬ್ಬಂದಿ ಮುಖ್ಯ ಪೈಪ್‌ ಮೂಲಕ ಸಾಗುವ ಅಮೋನಿಯಾ ಸರಬರಾಜನ್ನು ನಿಲ್ಲಿಸಿದ್ದರು. ಅದಾಗಲೇ ಅಮೋನಿಯಾ ಸೋರಿಕೆಯ ಪರಿಣಾಮ ವಾತಾವರಣ ಮೇಲಾಗಿದ್ದರಿಂದ ಭಯಭೀತರಾಗಿ ಸಂಸ್ಕರಣಾ ಘಟಕದಿಂದ ಹೊರಕ್ಕೆ ಬಂದ ಕಾರ್ಮಿಕರು, ಪೊಲೀಸ್‌ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದರು.

ಆದರೆ ಸಮೀಪದ ವಸತಿಗೃಹದಲ್ಲಿ ಮಲಗಿದ್ದ ಮಹಿಳಾ ಕಾರ್ಮಿಕರಿಗೆ ಅಮೋನಿಯಾ ಸೋರಿಕೆಯ ಬಗ್ಗೆ ಮಾಹಿತಿ ಇರದೆ ಇರುವುದರಿಂದಾಗಿ, ಗಾಳಿಯೊಂದಿಗೆ ಒಳ ಪ್ರವೇಶಿಸಿದ ಅಮೋನಿಯಾ ಸೇವನೆ ಹಾಗೂ ಸೊಂಕಿನಿಂದಾಗಿ 70ಕ್ಕೂ ಅಧಿಕ ಮಂದಿಗೆ ಎದೆ ಉರಿ, ಉಸಿರಾಟ ತೊಂದರೆ ಹಾಗೂ ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಕಾರ್ಮಿಕರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಸಕಾಲದಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದರಿಂದಾಗಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಕುಂದಾಪುರದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾಯಿಸುವ ಮೂಲಕ ಅಮೋನಿಯಾ ಸೋರಿಕೆಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅದು ನಿಯಂತ್ರಣಕ್ಕೆ ಬಾರದೆ ಇದ್ದುದರಿಂದ ಉಡುಪಿ ಅಗ್ನಿಶಾಮಕ ಘಟಕದ ನೆರವು ಪಡೆದುಕೊಳ್ಳಲಾಯಿತು. ನಿರಂತರ ಕಾರ್ಯಾಚರಣೆಯಿಂದ ಪರಿಸ್ಥಿತಿ ನಿಯಂತ್ರಿಸಲಾಯಿತು.

ಈ ನಡುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್ ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಭೇಟಿಯ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ‘ಅಮೋನಿಯಾ ಸೋರಿಕೆಯ ಬಗ್ಗೆ ಕಾರ್ಖಾನೆಯವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ವಾಸನೆಯಿಂದಾಗಿ ನಾವೆಲ್ಲ ಮನೆಯಿಂದ ಹೊರ ಬಂದಿದ್ದೆವು. ಒಂದು ವೇಳೆ ಇದು ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ ಇದರಿಂದಾಗುವ ಅನಾಹುತಕ್ಕೆ ಯಾರು ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Facebook Comments

comments