ಧರ್ಮಸ್ಥಳ ಸೆಪ್ಟೆಂಬರ್ 06: ಧರ್ಮಸ್ಥಳ ಕ್ಷೇತ್ರದ ವಿರುದ್ದ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶ ಧರ್ಮಸ್ಥಳದಲ್ಲಿ ನಡೆದಿದೆ. ಈ ವೇಳೆ ಮಾತಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನಾನು ಏನಾದರೂ ತಪ್ಪು ಮಾಡಿದ್ರೆ ಶಿಕ್ಷೆ ಕೊಡವುದು ಸರಕಾರವೂ ಅಲ್ಲ ಜನರು ಅಲ್ಲ ದೈವಗಳು ಶಿಕ್ಷೆ ಕೊಡುತ್ತದೆ ಎಂದರು.


ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯತೆಯಿಂದ ಕೃತಜ್ಞತೆ ಮತ್ತು ಸಂತೋಷ ವ್ಯಕ್ತಪಡಿಸಿದರು.

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪ ಸ್ವಾಮಿ ರಕ್ಷಣೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ. ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಜೊತೆಗೆ ಶಾಂತಿ, ನೆಮ್ಮದಿಯೂ ದೊರಕಿದೆ. ಅಲ್ಲದೆ, ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನಮಗೆ ಎಲ್ಲಾ ಸೇವಾಕಾರ್ಯಗಳನ್ನು ಮುಂದುವರೆಸಲು ನವ ಚೈತನ್ಯ ಮತ್ತು ಉತ್ಸಾಹ ಮೂಡಿಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.


ತಿಳಿಯದೆ ಮಾಡಿದ ತಪ್ಪಿಗೆ ದೈವಗಳು ಕ್ಷಮಿಸುತ್ತವೆ. ಆದರೆ ತಿಳಿದು ಮಾಡಿದರೆ ಅದಕ್ಕೆ ಶಿಕ್ಷೆ ಖಚಿತ. ನಾನು ಕಳೆದ 58 ವರ್ಷದಿಂದ ದೈವಗಳ ನುಡಿಗಟ್ಟು ಕೇಳುತ್ತಿದ್ದೇನೆ. ಪ್ರತಿ ಬಾರಿ ಹೊಸ ಮಾತು, ಹೊಸ ನುಡಿಗಟ್ಟು ಆಗಿರುತ್ತದೆ. ಹಾಗಾಗಿ ನನಗೆ ದುಷ್ಟರ ಮಾತಿಗೆ ಭಯವಿಲ್ಲ. ದೈವ ದೇವರ ಮೇಲೆ ಭಯವಿದೆ. ನನಗೆ ಅಣ್ಣಪ್ಪನೇ ಶ್ರೀರಕ್ಷೆ ಎಂದು ಪ್ರತಿಪಾದಿಸಿದರು.

ಧರ್ಮಜಾಗೃತಿ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು

– ಎಸ್‌ಐಟಿ ರಚಿಸಿದ್ದಕ್ಕೆ ಸರಕಾರಕ್ಕೆ, ಅಧಿಕಾರಿಗಳಿಗೆ ಸ್ವಾಗತ

– ಸಾಮಾಜಿಕ ಜಾಲತಾಣದ ಸುಳ್ಳು ಪ್ರಚಾರದ ವಿರುದ್ಧ ಕಾನೂನಾತ್ಮಕ ಕಠಿನ ನಿರ್ಣಯ

– ರಾಜ್ಯದ ಬೇರೆ ಬೇರೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರ ಮತ್ತು ಧಾರ್ಮಿಕ ನಂಬಿಕೆ ವಿರಿದ್ಧ ಘಾಸಿ ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಒತ್ತಾಯ

– ಧಾರ್ಮಿಕ ಶ್ರದ್ಧಾ ಕೇಂದ್ರದ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಧಾರ್ಮಿಕ ಮುಖಂಡರ ಮುಂದಾಳತ್ವದಲ್ಲಿ ಸಂಘಟಿತ ಹೋರಾಟ

– ಧಾರ್ಮಿಕ ಕೇಂದ್ರಗಳ ಸಂಘಟನಾ ದೃಷ್ಟಿಯಿಂದ ಧರ್ಮಸಂರಕ್ಷಣಾ ಸಮಿತಿ ಬಲಪಡಿಸಿ ವರ್ಷಕ್ಕೆ ಒಂದು ಬಾರಿ ಸಮಾವೇಶ ನಡೆಸಲು ನಿರ್ಣಯ

– ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ| ಡಿ. ಹೆಗ್ಗಡೆ ಅವರೊಂದಿಗೆ ದೃಢವಾಗಿ ನಿಂತು ಧರ್ಮ ಸಂರಕ್ಷಣೆ ಮಾಡಲು ಕಟಿಬದ್ಧರಾಗಿರುತ್ತೇವೆ.

– ನಿರ್ಣಯವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಕಳುಹಿಸಲು ನಿರ್ಣಯಿಸಲಾಯಿತು.

 

Share Information