LATEST NEWS
ಕಂಬಳ ಕೆರೆಯಲ್ಲಿ ಕೋಣಗಳ ಮಧ್ಯೆ ಪುಟಾಣಿ ಬಾಲಕಿ..!!
ಉಡುಪಿ: ಕರಾವಳಿಯಲ್ಲಿ ಈಗ ಕಂಬಳ ಸೀಸನ್..ಬಹುತೇಕ ವಾರಾಂತ್ಯದಲ್ಲಿ ಜಿಲ್ಲೆಯ ಒಂದಲ್ಲ ಒಂದು ಕಡೆ ಕಂಬಳ ನಡೆಯತ್ತಲೆ ಇದೆ. ಪ್ರತಿ ಕಂಬಳ ಋತುವಿನಲ್ಲಿ ಒಂದಲ್ಲ ಒಂದು ವಿಶೇಷತೆ ಕಂಡು ಬರುತ್ತಲೆ ಇದೆ. ಇತ್ತೀಚೆಗ ನಡೆದ ಕಂಬಳ ಒಂದರಲ್ಲಿ ಕೋಣ ಹಿಡಿದು ನಿಂತಿದ್ದ ಪುಟಾಣಿ ಬಾಲಕಿಯ ಪೋಟೋ ಒಂದು ವೈರಲ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.
ಈಗಾಗಲೇ ಕಂಬಳದಲ್ಲಿನ ಓಟಗಾರರ ವೇಗದಿಂದಾಗಿ ಅಂತಾರಾಷ್ಟ್ರೀಯ ಸೆಳೆತ ಪಡೆದುಕೊಂಡಿದೆ. ಪುರುಷರ ಪೌರುಷದ ಗ್ರಾಮೀಣ ಕ್ರೀಡೆಗೆ ಮಹಿಳೆಯರ ಎಂಟ್ರಿ ಕೊಡುವ ಕಾಲ ಸನ್ನಿಹಿತವಾಗಿದೆ. ಜಬರ್ದಸ್ತ್ ಕೋಣಗಳ ಜೊತೆ ಈಗ ಬಾಲಕಿಯೋರ್ವಳು ಕಂಬಳ ಕರೆಗೆ ಇಳಿಯುವ ಮೂಲಕ ಕರಾವಳಿಯ ಕಂಬಳ ಕ್ರೀಡೆಗೆ ಹೊಸ ಭಾಷ್ಯ ಬರೆದಿದ್ದಾಳೆ.
ಕಾರ್ಕಳ ತಾಲೂಕು ಮಿಯಾರಿನ ಲವಕುಶ ಜೋಡುಕರೆ ಕಂಬಳದಲ್ಲಿ ಬೈಂದೂರಿನ ಪರಮೇಶ್ವರ ಭಟ್ – ರಮ್ಯಾ ಅವರ ಪುತ್ರಿ ಚೈತ್ರಾ ಮೊತ್ತಮೊದಲ ಬಾರಿಗೆ ಕಂಬಳ ಕರೆಗೆ ಇಳಿದಿದ್ದಾಳೆ. ಈ ಮೂಲಕ ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಬಾಲಕಿಯ ಪ್ರವೇಶವಾಗಿದೆ.
ಕಾಲ್ತೊಡು ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆಗೆ ಚಿಕ್ಕಂದಿನಿಂದ ಕಂಬಳದ ಆಸಕ್ತಿ ಕೊಣಗಳ ಮೇಲೆ ಅಕ್ಕರೆ. ಹಗ್ಗ ಹಿಡಿದು, ಕೋಣಗಳ ಯಜಮಾನಿಕೆ ಹೊತ್ತು ಕಂಬಳ ಕರೆಗೆ ಇಳಿಯುವ ಗತ್ತಿಗೆ ಜಾನಪದ ಕ್ರೀಡೆಯ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಈಕೆಯ ಸಹೋದರ ರಾಮ್ ಭಟ್ ಕೂಡ ಕಂಬಳಪ್ರೇಮಿ. ಕೋಣಗಳಿಗೆ ಸ್ನಾನ, ಹುರುಳಿ ಬೇಯಿಸಿ ತಿನ್ನಿಸೋದು ಎಲ್ಲಾ ಮಾಡ್ತಾಳೆ ಚೈತ್ರಾ ಭಟ್. ವಾರಾಂತ್ಯ ಬಂದ್ರೆ ಸಾಕು ಟೀಶರ್ಟ್ ಹಾಕಿ ಮುಂಡಾಸು ಕಟ್ಟಿ ಹೊರಡುತ್ತಾಳೆ.
ಓಟಗಾರ ಶ್ರೀನಿವಾಸ ಗೌಡ ಅವರ ಫ್ಯಾನ್ ಈಕೆ. ಪುರುಷ ಪ್ರಧಾನ ಕಂಬಳ ಗದ್ದೆಗೆ ಆಯೋಜಕರು ಶಾಲು ಹಾಕಿ ಸ್ವಾಗತ ಮಾಡಿದ್ದಾರೆ. ಮುಂದೆ ಚೈತ್ರಾ ಕೋಣಗಳನ್ನು ಓಡಿಸಿ ಮೆಡಲ್ ಗೆಲ್ಲುವ ಕನಸು ಇಟ್ಟುಕೊಂಡಿದ್ದಾಳೆ. ಮಹಿಳಾ ಓಟಗಾರರಿಗೂ ಪ್ರಾಶಸ್ತ್ಯ ನೀಡುವ ಬಗ್ಗೆ ಕಂಬಳ ಅಕಾಡೆಮಿಯಲ್ಲಿ ಚರ್ಚೆ ನಡೆದಿದೆ. ಕೋಣ ಓಡಿಸದಿದ್ದರೂ ಕಂಬಳ ಗದ್ದೆಗೆ ಹೆಣ್ಮಗಳು ಇಳಿದಿರೋದು ದಾಖಲೆಯಾಗಿದೆ.