ರಾಂಚಿ ಫೆಬ್ರವರಿ : ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬುಲೆನ್ಸ್ ಪತನಗೊಂಡು ಅದರಲ್ಲಿದ್ದ ಏಳು ಮಂದಿಯೂ ಸಾವನಪ್ಪಿದ ಘಟನೆ ಛತ್ರ ಜಿಲ್ಲೆಯ ಸಿಮಾರಿಯಾ ಬಳಿ ನಡೆದಿದೆ.

ಏಳು ಶವಗಳನ್ನು ಹೊರತೆಗೆಯಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಶುಭಂ ಖಂಡೇಲ್ವಾಲ್ ಪಿಟಿಐಗೆ ದೃಢಪಡಿಸಿದರು. ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ಡಾಕ್ಟರ್ ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ, ಧುರು ಕುಮಾರ್ ಎಂದು ಗುರುತಿಸಲಾಗಿದೆ.

ರಾಂಚಿ ವಿಮಾನ ನಿಲ್ದಾಣದಿಂದ ಸೋಮವಾರ ಸಂಜೆ 7.10ಕ್ಕೆ ಹೊರಟ ಏರ್ ಆಂಬುಲೆನ್ಸ್, ಟೇಕ್ ಆಫ್ ಆದ ಸುಮಾರು 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು .
ರೋಗಿ, ಇಬ್ಬರು ಪೈಲಟ್‌ಗಳು ಸೇರಿದಂತೆ ಒಟ್ಟು ಏಳು ಜನರಿದ್ದ ಏರ್ ಆಂಬುಲೆನ್ಸ್ ಛತ್ರ ಜಿಲ್ಲೆಯ ಸಿಮಾರಿಯಾ ಬಳಿ ಅಪಘಾತಕ್ಕೀಡಾಗಿದೆ. ಘಟನೆಗೆ ಪ್ರತಿಕೂಲ ಹವಾಮಾನ ಕಾರಣವಿರಬಹುದು. ತನಿಖೆಯ ನಂತರವೇ ನಿಖರ ಕಾರಣ ತಿಳಿದುಬರಲಿದೆ ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.
ರಾಂಚಿ– ದೆಹಲಿ ವಲಯದಲ್ಲಿ ಏರ್ ಆಂಬುಲೆನ್ಸ್ ಆಗಿ ಕಾರ್ಯಾಚರಿಸುತ್ತಿದ್ದ ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ‘ಬೀಚ್‌ಕ್ರಾಫ್ಟ್ ಸಿ90’ ವಿಮಾನವು ಪತನಗೊಂಡಿದ್ದು, ಅದರಲ್ಲಿದ್ದ ಏಳು ಮಂದಿಯೂ ಮೃತಪಟ್ಟಿದ್ದಾರೆ ಎಂದು ಛತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಪಿಟಿಐಗೆ ತಿಳಿಸಿದ್ದಾರೆ.



