ತಿರುವನಂತಪುರಂ: ಹೆತ್ತ ಕಂದನನ್ನು ಕಳೆದುಕೊಂಡ ಅತೀವ ನೋವಿನ ನಡುವೆಯೂ, ಆ ಕಂದನ ಮೂಲಕ ಮತ್ತೊಂದು ಮಗುವಿಗೆ ಮರುಜೀವ ನೀಡಿದ ಕೇರಳದ ದಂಪತಿಯ ಮಾನವೀಯತೆ ಈಗ ಇಡೀ ದೇಶದ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ 9 ತಿಂಗಳ ಪುಟ್ಟ ಅಲಿನ್ ಶೆರಿನ್ (Aalin Sherin), ಇಂದು ಐದು ಕುಟುಂಬಗಳ ಪಾಲಿನ ದೇವರಾಗಿದ್ದಾಳೆ.

2025ರ ಫೆಬ್ರುವರಿ 5 ರಂದು ಕೊಟ್ಟಾಯಂನ ಪಲ್ಲಂ ಜಂಕ್ಷನ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಅಲಿನ್ ತಲೆಗೆ ಗಂಭೀರ ಗಾಯವಾಗಿತ್ತು. ತಿರುವಲ್ಲ ಮತ್ತು ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಸತತ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಫೆಬ್ರುವರಿ 10 ರಂದು ಮಗು ಮಿದುಳು ನಿಷ್ಕ್ರಿಯಗೊಂಡು (Brain Dead) ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ತಮ್ಮ ಮಗು ಇನ್ನಿಲ್ಲ ಎಂಬ ಸತ್ಯ ತಿಳಿದ ಪೋಷಕರಾದ ಅರುಣ್ ಮತ್ತು ಶೆರಿನ್, ತಮ್ಮ ಮಗಳ ಅಂಗಾಂಗಗಳು ಬೇರೆ ಮಕ್ಕಳ ಜೀವ ಉಳಿಸಲಿ ಎಂಬ ಮಹತ್ತರ ನಿರ್ಧಾರ ತಳೆದು ಅಂಗಾಂಗ ದಾನಕ್ಕೆ ಮುಂದಾದರು. ಕೇರಳದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಅಲಿನ್ ಪಾತ್ರಳಾದಳು. ಆಕೆಯ ಹೃದಯ, ಕಿಡ್ನಿ, ಕಣ್ಣು ಮತ್ತು ಯಕೃತ್ತನ್ನು (Liver) ದಾನ ಮಾಡಲಾಯಿತು.
ಸಾಮಾನ್ಯವಾಗಿ ಅಂಗಾಂಗ ಪಡೆದವರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ. ಆದರೆ, ಅಲಿನ್ ಹೆತ್ತವರ ತ್ಯಾಗಕ್ಕೆ ಗೌರವ ಸಲ್ಲಿಸಲು ತಿರುವನಂತಪುರಂನ ಕಿಮ್ಸ್ ಹೆಲ್ತ್ ಆಸ್ಪತ್ರೆಯಲ್ಲಿ ಯಕೃತ್ತು ಪಡೆದು ಬದುಕುಳಿದ ಮಗುವಿನ ಭೇಟಿಗೆ ಅವಕಾಶ ಮಾಡಿಕೊಡಲಾಗಿತ್ತು. ಆ ಮಗುವನ್ನು ಮಡಿಲಿಗೆ ಪಡೆದ ಶೆರಿನ್ ದಂಪತಿ, ತಮ್ಮ ಮಗಳನ್ನೇ ಕಂಡಂತೆ ಭಾವುಕರಾದರು. ಅಂಗಾಂಗ ಪಡೆದ ಮಗುವಿನ ಹೆತ್ತವರು ಕೂಡ ಅಲಿನ್ ಪೋಷಕರ ಪಾದಕ್ಕೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ ಕ್ಷಣ ಆಸ್ಪತ್ರೆಯಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿತು.