ಟೆಹ್ರಾನ್/ಜೆರುಸಲೇಂ ಮಾರ್ಚ್ 17: ಇರಾನ್ನ ಭದ್ರತಾ ಕಾರ್ಯತಂತ್ರದ ಮಾಸ್ಟರ್ ಮೈಂಡ್ ಹಾಗೂ ಟೆಹ್ರಾನ್ನ ಪ್ರಬಲ ಧ್ವನಿಯಾಗಿದ್ದ ಅಲಿ ಲಾರಿಜಾನಿ (67) ಅವರು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ದಾಳಿಯಲ್ಲಿ ಲಾರಿಜಾನಿ ಸಾವನ್ನಪ್ಪಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಏತನ್ಮಧ್ಯೆ, ಇರಾನ್ನಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಇಸ್ರೇಲಿ ವೈಮಾನಿಕ ದಾಳಿಯು ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದಿ ನಾಯಕ ಅಕ್ರಮ್ ಅಲ್-ಅಜೌರಿ ಮತ್ತು ಭಯೋತ್ಪಾದಕ ಗುಂಪಿನ ಇತರ ಉನ್ನತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ದಾಳಿಯ ಆರಂಭಿಕ ದಿನಗಳಲ್ಲೇ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇರಾನ್ ಕಳೆದುಕೊಂಡಿತ್ತು. ಅಲಿ ಖಮೇನಿ ಅವರ ಉತ್ತರಾಧಿಕಾರಿ ಎಂದು ನಂಬಲಾದ ಮೊಜ್ತಾಬಾ ಖಮೇನಿ ಕೂಡ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಕೋಮಾದಲ್ಲಿದ್ದಾರೆ ಎಂಬ ವರದಿಗಳು ಬಂದಿವೆ. ಸೋಮವಾರ ರಾತ್ರಿ ನಡೆದ ಮತ್ತೊಂದು ದಾಳಿಯಲ್ಲಿ ಇರಾನ್ನ ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಕೂಡ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ಖಚಿತಪಡಿಸಿದೆ.
ಇರಾನ್ನ ಪ್ರಸ್ತುತ ಅಸ್ತವ್ಯಸ್ತ ಸ್ಥಿತಿಯಲ್ಲಿ ಲಾರಿಜಾನಿ ಅವರು ಪರಿವರ್ತನಾ ಮಂಡಳಿಯ ಮೂಲಕ ದೇಶವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರ ನಿರ್ಗಮನವು ಇರಾನ್ನ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದೆ.